ಕಾರವಾರ: ಪಂಚಾಯತ್ ಗಳಲ್ಲಿ ಕೆಲಸ ಮಾಡುವ ನೌಕರರಿಗೆ ಯಾವುದೇ ಭದ್ರತೆಯಿಲ್ಲ, ಸರ್ಕಾರ ನೌಕರರಿಗೆ ಕನಿಷ್ಟ ವೇತನ ನಿಗದಿ ಮಾಡಬೇಕು ಎಂದು
ಗ್ರಾಮ ಪಂಚಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ನಾಯ್ಕ ಹೇಳಿದರು. ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಪಂಚಾಯತ್ ವ್ಯಾಪ್ತಿಯಲ್ಲಿ ಬಿಲ್ ಕಲೆಕ್ಟರ್, ಕ್ಲರ್ಕ್, ಡಾಟಾ ಎಂಟ್ರಿ, ವಾಟರ್ ಮ್ಯಾನ್, ಶುಚಿತ್ವ ನೌಕರ ಹಾಗೂ ಅಟೆಂಡರ್ ಗಳು ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ನೌಕರರ ಸೇವಾ ಭದ್ರತೆಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಬೆಳಗಾವಿಯ ಅಧಿವೇಶದ ವೇಳೆ, ಹಾಗೂ ವಿವಿಧ ಭಾಗದಲ್ಲಿ ಪಂಚಾಯತ ನೌಕರರು ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಈವರೆಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪಂಚಾಯತ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲಾ ನೌಕರರು ಸೇರಿ ನವೆಂಬರ್ 27 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು. ಪಂಚಾಯತ್ ವ್ಯಾಪ್ತಿಯಲ್ಲಿ ಆರು ವೃಂದದಲ್ಲಿ ಕೆಲಸ ಮಾಡುವವರು ಜಿಲ್ಲೆಯಲ್ಲಿ 1500 ಜನರಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಂಚಾಯತಿ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದರು.
ಸದ್ಯ ಪಂಚಾಯತ್ ವ್ಯಾಪ್ತಿಯ ನೌಕರರಿಗೆ ಕಾರ್ಮಿಕ ಇಲಾಖೆಯ ಪರಿಷ್ಕರಣೆಯಂತೆ ವೇತನ ನೀಡಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯೇ ವೇತನ ನಿಗದಿ ಮಾಡಬೇಕು ಎನ್ನುವುದು ನಮ್ಮ ಆಗ್ರಹ. ಪಂಚಾಯತ ನೌಕರನ್ನ ಗ್ರೂಪ್ ಸಿ, ಗ್ರೂಪ್ ಡಿ ನೌಕರರು ಎಂದು ನಿಗದಿ ಮಾಡಿ ಆ ನೌಕರರಿಗೆ ಕೊಡುವ ಸೌಲಭ್ಯ ಪಂಚಾಯತ್ ನೌಕರರಿಗೂ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಲ್ ಕಲೆಕ್ಟರ್ ಹಾಗೂ ಕ್ಲರ್ಕ್ ಗೆ 17 ಸಾವಿರ, ವಾಟರ್ ಮ್ಯಾನ್ ಹಾಗೂ ಪಂಪ್ ಆಪರೇಟರ್ ಗೆ 15 ಸಾವಿರ, ಸ್ವಚ್ಚತಾ ನೌಕರನಿಗೆ 18 ಸಾವಿರ ಹಾಗೂ ಅಟೆಂಡರ್ ಗೆ 15 ಸಾವಿರ ನಿಗಧಿ ಮಾಡಲಾಗಿದೆ. ಸಂಬಳ ಬಿಟ್ಟರೆ ಸರ್ಕಾರ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಕನಿಷ್ಟ ಪಿಎಫ್ ಸೌಲಭ್ಯವನ್ನೂ ನೀಡಿಲ್ಲ. ಸರ್ಕಾರದ ಸೌಲಭ್ಯಗಳನ್ನು ಗ್ರಾಮೀಣ ಭಾಗದಲ್ಲಿ ಜನರಿಗೆ ಮುಟ್ಟಿಸುವ ಕೆಲಸವನ್ನ ಪಂಚಾಯತಿಯ ನೌಕರರು ಮಾಡುತ್ತಿದ್ದು, ಸರ್ಕಾರ ನಮ್ಮ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ, ಯೋಗೀಶ್ ನಾಯ್ಕ, ಕಾರವಾರ ತಾಲೂಕು ಅಧ್ಯಕ್ಷ ಮಂಗೇಶ್ ಗೋವೇಕರ್, ಭಟ್ಕಳ ತಾಲೂಕು ಸಮಿತಿ ಉಪಾಧ್ಯಕ್ಷ ದಾಮು ನಾಯ್ಕ ಉಪಸ್ಥಿತರಿದ್ದರು.