Gokarna Mahamandalotsava: ನಾಳೆಯಿಂದ ಹವ್ಯಕ ಮಹಾಮಂಡಲೋತ್ಸವ; ಅಶೋಕೆ ಸಜ್ಜು

ಗೋಕರ್ಣ: ಹವ್ಯಕ ಸಂಸ್ಕೃತಿ- ಸಂಪ್ರದಾಯ, ಆಹಾರ- ವಿಹಾರ, ಆಚಾರ- ವಿಚಾರಗಳನ್ನು ಬಿಂಬಿಸುವ ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲೋತ್ಸವ ಈ ತಿಂಗಳ 16 ರಿಂದ 18ರವರೆಗೆ ಅಶೋಕೆ ಪರಿಸರದಲ್ಲಿ ನಡೆಯಲಿದೆ. ಮಹಾಮಂಡಲ ವ್ಯಾಪ್ತಿಯ ಎಲ್ಲ 11 ಮಂಡಗಳಿಂದ ಆಗಮಿಸುವ ಐದು ಸಾವಿರಕ್ಕೂ ಹೆಚ್ಚು ಶಿಷ್ಯಭಕ್ತರು, ಯುವಕರು, ವಿದ್ಯಾರ್ಥಿಗಳು ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಇದರ ಅಂಗವಾಗಿ ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತು ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು 16ರಂದು ಮಧ್ಯಾಹ್ನ ವಿದ್ಯಾನಂದ ಆವರಣದಲ್ಲಿ ಹವ್ಯಕ ಆಹಾರೋತ್ಸವ ಉದ್ಘಾಟಿಸುವ ಮೂಲಕ ಮಹಾಮಂಡಲೋತ್ಸವಕ್ಕೆ ಚಾಲನೆ ನೀಡುವರು. ನಾಡಿನ ಆಯಾ ಪ್ರಾಂತ್ಯಗಳ ವಿಶೇಷ ತಿಂಡಿ ತಿನಸುಗಳು, ಖಾದ್ಯಗಳು, ಹವ್ಯಕರ ಆಹಾರ ಪದ್ಧತಿಯನ್ನು ಸಮಾಜಕ್ಕೆ ಬಿಂಬಿಸುವುದು ಆಹಾರೋತ್ಸವದ ಉದ್ದೇಶ.

ಉಂಡ್ಲಕಾಳು, ಹಲಸಿನ ಉಪ್ಪು ಸೊಳೆ ವಡೆ, ಮೈಸೂರುಪಾಕ್, ಸೆವೆನ್‍ಕಪ್, ಚಕ್ಕುಲಿ, ಖಾರಾ ಬೂಂದಿ, ಮನೋಹರಮ ತುಕ್ಕುಡಿ (ಶಂಕರಪೀಳೆ), ಬಾಳೆಕಾಯಿ ಚಿಪ್ಸ್, ಕಾರಕಡ್ಡಿ/ಸೇಮಿಗೆ, ಕಾಯಿವಡೆ, ಬೆಲ್ಲ + ತೆಂಗಿನಕಾಯಿ ಉಂಡೆ, ಅತಿರಸ, ಸುಕ್ಕಿನುಂಡೆ, ನೇಂದ್ರ ಚಿಪ್ಸ್, ಚಾಕೊಲೇಟ್ ಕಡಿ, ಸೋಂಪಾ ಪುಡಿ, ಕೋಡುಬಳೆ, ಖಾರಾ ಶೇವ್, ಪಪ್ಪಾಯಿ ಸಿಹಿ (ಹಲ್ವ), ನಿಪ್ಪಟ್ಟು, ಬಾಳೆ ಹಣ್ಣಿನ ಹಲ್ವ, ಬೂಂದಿ ಲಾಡು, ಅವಲಕ್ಕಿ ಚುಡುವಾ, ರವೆ ಉಂಡೆ, ಮಿಶ್ಚರ್, ಕಾಯಿ ಹೋಳಿಗೆ, ಗೋಡಂಬಿ ಚಿಕ್ಕಿ, ಕ್ಯಾರೆಟ್- ತೆಂಗಿನಕಾಯಿ ಬರ್ಫಿ, ಇದರ ಜತೆಗೆ ಬಿಸಿ ಬಿಸಿ ದೋಸೆ, ಜಿಲೇಬಿ, ಬಿಸ್ಕೆಟ್ ರೊಟ್ಟಿ, ಬೇಯಿಸಿದ ಶೇಂಗಾ, ಹಲಸಿನ ಎಲೆಯ ಕೊಟ್ಟೆ ಕಡುಬು ಹೀಗೆ ಹವ್ಯಕ ಖಾದ್ಯಗಳ ವಿಶ್ವರೂಪದರ್ಶನವಾಗಲಿದೆ.

Advertisement

Vijayaprabha Mobile App free

ಇದರ ಜೊತೆಗೆ 16 ರಂದು ಸಂಜೆಯಿಂದ ಸಂಧ್ಯಾರಾಗ ಮತ್ತು ಉದಯರಾಗ ಪರಿಕಲ್ಪನೆಯಡಿ ಸಂಗೀತೋತ್ಸವ ಮೂರು ದಿನಗಳ ಕಾಲ ನಡೆಯಲಿದೆ. ಕರ್ನಾಟಕ ಹಾಗೂ ಹಿಂದೂಸ್ತಾನಿ ಹೀಗೆ ಎರಡೂ ಪ್ರಕಾರಗಳಿಗೆ ಸೇರಿದ ನಾಡಿನ ಉದಯೋನ್ಮುಖ ಕಲಾವಿದರು ಕಚೇರಿ ನೀಡುವರು.

ವಲಯ ಮತ್ತು ಮಂಡಲ ಮಟ್ಟದಲ್ಲಿ ನಡೆದ ವಿವಿಧ ಬೌದ್ಧಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ 1250ಕ್ಕೂ ಹೆಚ್ಚು ಮಂದಿ ಸ್ಪರ್ಧಾಳುಗಳು ಮಹಾಮಂಡಲ ಮಟ್ಟದ ಸ್ಪರ್ಧೆಗಾಗಿ ಆಗಮಿಸುತ್ತಿದ್ದು, ಸುಮಾರು 43 ಕ್ರೀಡಾ/ ಬೌದ್ಧಿಕ ಸ್ಪರ್ಧೆಗಳು 17 ಮತ್ತು 18ರಂದು ನಡೆಯಲಿವೆ. ಇದು ಹವ್ಯಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹಾಮಂಡಲದ ವಿದ್ಯಾರ್ಥಿ ಹಾಗೂ ಯುವ ವಿಭಾಗದ ಮಹತ್ವದ ಕಾರ್ಯಕ್ರಮಗಳಲ್ಲೊಂದಾಗಿದೆ. ಈಗಾಗಲೇ ವಲಯ ಹಾಗೂ ಮಂಡಲ ಮಟ್ಟದ ಸ್ಪರ್ಧೆಗಳಲ್ಲಿ ಸುಮಾರು 15 ಸಾವಿರ ಮಂದಿ ಪಾಲ್ಗೊಂಡಿದ್ದು, ಅಲ್ಲಿ ವಿಜೇತರಾದವರು ಮಹಾಮಂಡಲ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಉದಯೋನ್ಮುಖ ಕಲಾವಿದರಿಂದ ಶಿಲ್ಪಕಲೋತ್ಸವ ಈ ಬಾರಿಯ ಮಹಾಮಂಡಲೋತ್ಸವದ ಮತ್ತೊಂದು ವಿಶೇಷ. ಪುರಾಣದ ಯುವ ಸಾಧಕರ ಶಿಲಾಶಿಲ್ಪಗಳನ್ನು ಪ್ರತಿಭಾವಂತ ಕಲಾವಿದರು ಇಲ್ಲೇ ನಿರ್ಮಿಸಿ, ಜೀವಕಳೆ ತುಂಬಿ ವಿವಿವಿಗೆ ಕೊಡುಗೆಯಾಗಿ ನೀಡಲಿದ್ದಾರೆ. ಅಂತೆಯೇ ಭಾವ ರಾಮಾಯಣದ ಆಯ್ದ ಸನ್ನಿವೇಶಗಳ ಚಿತ್ರಣ, ಯುವ ಸಾಧಕರ ಜೀವನ ಸಾಧನೆಯನ್ನು ಬಿಂಬಿಸುವ ಅಪೂರ್ವ ಚಿತ್ರಕಲೋತ್ಸವ ಕೂಡಾ ಸೇರಿದೆ.

ಯಕ್ಷೋತ್ಸವ, ನಾಟಕೋತ್ಸವ, ಎರಡು ದಿನಗಳ ಕಾಲ ಅಖಂಡ ಭಜನೋತ್ಸವ, ಚಿಣ್ಣರ ಉತ್ಸವಗಳು ವಿಶೇಷ ಮೆರುಗು ನೀಡಲಿವೆ. ಒಂದು ವರ್ಷದ ಒಳಗಿನ ಮಕ್ಕಳಿಗಾಗಿ ಆರೋಗ್ಯವಂತ ಶಿಶು ಸ್ಪರ್ಧೆ, ಮೂರು ವರ್ಷದ ಮಕ್ಕಳೊಂದಿಗೆ ತಾಯಂದಿರು ಸೆಲ್ಫಿ ಕ್ಲಿಕ್ಕಿಸುವ ಸ್ಪರ್ಧೆ, ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿ ಸ್ಪರ್ಧೆ ಹೀಗೆ ಹತ್ತು ಹಲವು ಸ್ಪರ್ಧೆಗಳೂ ಆಯೋಜನೆಗೊಂಡಿವೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ 20ಕ್ಕೂ ಹೆಚ್ಚು ಭಜನಾ ತಂಡಗಳು ಅಖಂಡವಾಗಿ ಕಾರ್ಯಕ್ರಮ ನಡೆಸಿಕೊಡುವರು.

18ರಂದು ಮಧ್ಯಾಹ್ನ ಮಹಾಮಂಡಲೋತ್ಸವ ಸಭಾ ಕಾರ್ಯಕ್ರಮದ ಸಾನ್ನಿಧ್ಯವನ್ನು ರಾಘವೇಶ್ವರಭಾರತೀ ಸ್ವಾಮೀಜಿಯವರು ಮತ್ತು ಶ್ರೀಕ್ಷೇತ್ರ ಶಕಟಪುರದ ಶ್ರೀ ವಿದ್ಯಾಪೀಠಾಧೀಶ್ವರರಾದ ಬದರೀ ಶಂಕರಾಚಾರ್ಯ ಶ್ರೀ ತೋಟಕಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಉಭಯ ಶ್ರೀಗಳ ಆಶೀರ್ವಚನ, ಪ್ರಶಸ್ತಿ ವಿತರಣೆ, ಸಮಾರೋಪ ಸಮಾರಂಭದಲ್ಲಿ ಇರುತ್ತದೆ ಎಂದು ಪ್ರಕಟಣೆ ಹೇಳಿದೆ.

ವಿದ್ಯಾರ್ಥಿ ಹಾಗೂ ಯುವ ವಿಭಾಗದ ಮುಖ್ಯಸ್ಥರಾದ ಈಶ್ವರ ಪ್ರಸಾದ್ ಕನ್ಯಾನ, ಕೇಶವ ಪ್ರಕಾಶ್ ಮುಣ್ಚಿಕಾನ ಹಾಗೂ ಮಹಾಮಂಡಲ ಪದಾಧಿಕಾರಿಗಳ ನೇತೃತ್ವದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಎಲ್ಲ ಉತ್ಸವಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆ. ಸಾಂಸ್ಕøತಿಕ ಕಾರ್ಯಕ್ರಮಗಳು ಸಂಜೆ 5 ರಿಂದ ರಾತ್ರಿ 10.30ರ ವರೆಗೆ ಇದ್ದು, ಆಹಾರೋತ್ಸವ 16 ರಂದು ಮಧ್ಯಾಹ್ನದಿಂದ 18ರ ಸಂಜೆವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!