ಕಲಬುರಗಿ: ಇಲ್ಲಿನ ಐತಿಹಾಸಿಕ ಧಾರ್ಮಿಕ ಕೇಂದ್ರವಾದ ಖಾಜಾ ಬಂದೇ ನವಾಜ್ ದರ್ಗಾದ(KBN) ಸೂಫಿ ಸಂತ ಸೈಯದ್ ಶಹಾ ಖುಸ್ರೊ ಹುಸೇನಿ (79) ಅವರು ಬುಧವಾರ ನಿಧನರಾದರು. ಇವರು ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಸಂಸ್ಥಾಪಕರಾಗಿದ್ದರು. ಮುಂದೆ ಕುಲಪತಿಯೂ ಆದರು. ಖಾಜಾ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಸೈಯದ್ ಶಹಾ ಖುಸ್ರೊ ಹುಸೇನಿ ಅವರು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. 1972ರಿಂದಲೇ ಅವರು KBN ಶಿಕ್ಷಣ ಸಂಸ್ಥೆಯೊಂದಿಗೆ ನಂಟು ಹೊಂದಿದ್ದರು. ವೈದ್ಯಕೀಯ, ಎಂಜಿನಿಯರಿಂಗ್, ಬಿ.ಇಡಿ ಕಾಲೇಜುಗಳನ್ನು ಪ್ರಾರಂಭಿಸಿದ್ದಾರೆ.
ಮಹಿಳೆಯರಿಗಾಗಿ ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಅರೇಬಿಕ್ ಭಾಷೆಯ ಕಾಲೇಜುಗಳನ್ನು ತೆರೆದಿದ್ದಾರೆ.