ದಾವಣಗೆರೆ: ಲಿಂಗದೀಕ್ಷೆ ಪಡೆದವರು ಜನರಿಗೆ ಧರ್ಮ ಸಂಸ್ಕಾರವನ್ನೂ ನೀಡುವ ಕೆಲಸವನ್ನು ಅಷ್ಟೇ ಶ್ರದ್ಥೆ, ಆಸಕ್ತಿಯಿಂದ ಮಾಡಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು.
ನಗರದ ಹಳೆ ಪಿಬಿ ರಸ್ತೆಯ ಶ್ರೀಶೈಲ ಮಠದಲ್ಲಿ ಬುಧವಾರ ಶ್ರೀಶೈಲ ಜಗದ್ಗುರು ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ 38ನೇ ಪುಣ್ಯಾರಾಧನೆ, ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ 13ನೇ ವಾರ್ಷಿಕ ಪುಣ್ಯ ಸ್ಮರಣೋತ್ಸವ ಅಂಗವಾಗಿ 50ಕ್ಕೂ ಹೆಚ್ಚು ವಟುಗಳಿಗೆ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಲಿಂಗದೀಕ್ಷೆ ನೀಡಿ ಮಾತನಾಡಿದ ಅವರು, ದೀಕ್ಷೆ ಪಡೆದವರು ಧರ್ಮ ಸಂಸ್ಕಾರವನ್ನು ನೀಡುವ ಕೆಲಸ ತಪ್ಪದೇ ಮಾಡಬೇಕು ಎಂದರು. ಸ್ವಾಮಿಗಳ ಕೈಯಲ್ಲಿ ದಂಡ ಕೊಡುವುದು ದೌರ್ಜನ್ಯ ಮಾಡುವುದಕ್ಕಲ್ಲ. ಜೋಳಿಗೆ ಕೊಡುವುದು ಭಕ್ತರು ನೀಡಿದ್ದನ್ನು ತಂದು, ಮನೆ ತುಂಬಿಕೊಳ್ಳುವುದಕ್ಕಲ್ಲ. ಆದ್ದರಿಂದ ಲಿಂಗದೀಕ್ಷೆ ಪಡೆದ ವಟುಗಳು ದಂಡ, ಜೋಳಿಗೆ ಹಿಡಿದು, ಧರ್ಮ ಸಂಸ್ಕಾರ ನೀಡುವ ಕೆಲಸವನ್ನು ಮಾಡಬೇಕು. ಭಕ್ತರ ಮನೆ ಮನೆಗೆ ಹೋದ ವೇಳೆ ಲಿಂಗ ಪೂಜೆ, ಲಿಂಗ ಕಟ್ಟಿರುವುದು, ವಿಭೂತಿ ಹಂಚಿರುದನ್ನು ಗಮನಿಸುವುದೂ ನಿಮ್ಮ ಜವಾಬ್ಧಾರಿ ಎಂದು ಅವರು ತಿಳಿಸಿದರು.
ನಂತರ ನಡೆದ ಉಭಯ ಲಿಂಗೈಕ್ಯ ಜಗದ್ಗುರುಗಳ ಭಾವಚಿತ್ರ ಮೆರವಣಿಗೆ ಶ್ರೀಶೈಲ ಮಠದಿಂದ ಶ್ರೀ ಮಠದ ಆನೆ, ಪೂರ್ಣ ಕುಂಭ, ಕಳಸ, ಕನ್ನಡಿ, ಸಕಲ ಮಂಗಳ ವಾದ್ಯ ವೈಭವದಿಂದ ಪ್ರಾರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸದ್ಯೋಜಾತ ಮಠದ ಬಳಿ ಕೊನೆಗೊಂಡಿತು. ಆವರಗೊಳ್ಳ ಮಠದ ಓಂಕಾರ ಸ್ವಾಮಿಗಳು ಸೇರಿದಂತೆ ಇತರರು ಇದ್ದರು.