ಹಾಸನ: ಇನ್ನೊಂದು ವಾರದಲ್ಲಿ ಹಸೆಮಣೆ ಏರಬೇಕಿದ್ದ ಪೊಲೀಸ್ ಪೇದೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನ ತಾಲ್ಲೂಕಿನ ದುದ್ದ ಗ್ರಾಮದಲ್ಲಿ ನಡೆದಿದೆ. ಅರಸೀಕೆರೆ ತಾಲ್ಲೂಕಿನ, ಬಾಗೇಶಪುರ ಗ್ರಾಮದ ಹರೀಶ್.ವಿ(32) ಕೊಲೆಯಾದ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದಾನೆ.
ಬೆಂಗಳೂರಿನ KSISF ನಲ್ಲಿ ಕಾನ್ಸ್‌ಟೇಬಲ್ ಆಗಿದ್ದ ಹರೀಶ್ ಅವರಿಗೆ ಇದೇ ತಿಂಗಳು 11 ರಂದು ಮದುವೆ ನಿಶ್ಚಯವಾಗಿತ್ತು. ಮದುವೆ ಆಮಂತ್ರಣ ಪತ್ರಿಕೆ ಹಂಚಿ ಸೋಮವಾರ ರಾತ್ರಿ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ದುದ್ದ ಗ್ರಾಮದ ಹೊರವಲಯದಲ್ಲಿರುವ ಡಾಬಾ ಸರ್ಕಲ್‌ನಲ್ಲಿ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದಾರೆ. ಈ ಸಂಬಂಧ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.