ಚಿಕ್ಕಮಗಳೂರು: ವೀಕೆಂಡ್‌ಗೆ ಕಾಫಿನಾಡು ಚಿಕ್ಕಮಗಳೂರಿಗೆ ಟ್ರಿಪ್ ಪ್ಲ್ಯಾನ್ ಮಾಡ್ತಿದೀರಾ ಅಂದ್ರೆ ಈ ಸುದ್ದಿಯನ್ನು ನೀವು ಓದಲೇಬೇಕು. ಯಾಕಂದ್ರೆ ಈ ವಾರಾಂತ್ಯದಲ್ಲಿ ಚಿಕ್ಕಮಗಳೂರಿನ ಕೆಲವು ಪ್ರವಾಸಿತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದು, ಪ್ರವಾಸಕ್ಕೆ ಬರುವವರು ಮುನ್ನೆಚ್ಚರಿಕೆ ವಹಿಸಬೇಕಿದೆ.
ಶ್ರೀರಾಮಸೇನೆಯ ದತ್ತಮಾಲಾ ಅಭಿಯಾನ ಆರಂಭವಾಗಿರುವ ಹಿನ್ನೆಲೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಪಶ್ಚಿಮಘಟ್ಟಗಳ ತಪ್ಪಲಿನ ಮುಳ್ಳಯ್ಯನಗಿರಿ, ದತ್ತಪೀಠ, ಗಾಳಿಕೆರೆ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರ ತಾಣಗಳಿಗೆ ನವೆಂಬರ್ 9 ಹಾಗೂ 10 ರಂದು ಎರಡು ದಿನ ನಿರ್ಬಂಧ ಹೇರಲಾಗಿದೆ.
ಪ್ರವಾಸಿಗರಿಗೆ ನಿರ್ಬಂಧದ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮುಳ್ಳಯ್ಯನಗಿರಿ, ದತ್ತಪೀಠ ಭಾಗದಲ್ಲಿ ದತ್ತ ಮಾಲಾಧಾರಿಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ. ಹೀಗಾಗಿ ಪ್ರವಾಸಕ್ಕೆ ಪ್ಲಾನ್ ಮಾಡುವವರು ಇದನ್ನು ಗಮನದಲ್ಲಿರಿಸಿಕೊಂಡು ಚಿಕ್ಕಮಗಳೂರು ಪ್ರವಾಸದ ಯೋಜನೆ ರೂಪಿಕೊಳ್ಳುವುದು ಅನುಕೂಲವಾಗಲಿದೆ.