ಹಾಸನ: ಕಳೆದ 11 ದಿನಗಳಿಂದ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಜರುಗಿದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವಕ್ಕೆ ಇಂದು ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಕಳೆದ ಹನ್ನೊಂದು ದಿನಗಳಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದ ಹಾಸನಾಂಬಾ ದೇವಿಯ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು.
ಮಧ್ಯಾಹ್ನ 12.33 ಕ್ಕೆ ಸರಿಯಾಗಿ ದೇವಾಲಯದ ಗರ್ಭಗುಡಿ ಬಾಗಿಲನ್ನು ಬಂದ್ ಮಾಡಲಾಗಿದ್ದು, ಶಾಸಕರುಗಳಾದ ಎಚ್.ಪಿ.ಸ್ವರೂಪ್‌ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್‌ಪಟೇಲ್, ಡಿಸಿ ಸಿ.ಸತ್ಯಭಾಮ, ಎಸ್ಪಿ ಮಹಮದ್ ಸುಜೇತಾ, ದೇವಾಲಯದ ಆಡಳಿತಾಧಿಕಾರಿ ಮಾರುತಿ ಅವರ ಸಮಕ್ಷಮದಲ್ಲಿ ಗರ್ಭಗುಡಿ ಬಾಗಿಲನ್ನು ಮುಚ್ಚಲಾಯಿತು. ಕೊನೇ ಕ್ಷಣದಲ್ಲೂ ನೂರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
ಕಳೆದ 11 ದಿನಗಳಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ರಾಜ್ಯ, ಹೊರರಾಜ್ಯಗಳಿಂದ ಆಗಮಿಸಿದ ಲಕ್ಷಾಂತರ ಮಂದಿ ಭಕ್ತರು ದೇವಿಯನ್ನು ಕಣ್ತುಂಬಿಕೊಂಡಿದ್ದರು. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹಾಸನಾಂಬಾ ದೇಗುಲಕ್ಕೆ ಭಕ್ತರು ಹರಿದುಬಂದಿದ್ದು, ದೇವಿಯ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿತ್ತು. ಅಲ್ಲದೇ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಈ ಬಾರಿ ಮಹಿಳಾ ಭಕ್ತರು ದೇವಿಯ ದರ್ಶಕ್ಕೆ ಆಗಮಿಸಿದ್ದು ಈ ಬಾರಿಯ ವಿಶೇಷವಾಗಿತ್ತು.
ಸದ್ಯ 11 ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿದ್ದು, ಒಂದು ವರ್ಷ ಕಾಲ ಶಕ್ತಿ ದೇವತೆ ಹಾಸನಾಂಬೆ ದೇವಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ. ಮುಂದಿನ ವರ್ಷ ಅಕ್ಟೋಬರ್ 9, 2025 ರಿಂದ 23 ಅಕ್ಟೋಬರ್ 2025 ರವರೆಗೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದೆ. ಇನ್ನೊಂದೆಡೆ ಗರ್ಭಗುಡಿ ಬಾಗಿಲುಮುಚ್ಚುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಗೈರಾಗಿದ್ದು, ಅಧಿಕಾರಿಗಳಿಗೆ ಅನಾರೋಗ್ಯದ ಕಾರಣ ನೀಡಿದ್ದಾರೆ ಎನ್ನಲಾಗಿದೆ.