ಬೆಳಗಾವಿ: ದೇಶದಾದ್ಯಂತ ವಿವಿಧೆಡೆ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಕೇಳಿಬಂದಿದೆ. ಏರ್‌ಪೋರ್ಟ್ ಅಥಾರಿಟಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಚೆನ್ನೈನಿಂದ ಬೆಳಗಾವಿಗೆ ಬರುವ ವಿಮಾನದಲ್ಲಿ ಬಾಂಬ್ ಇಡುವುದಾಗಿ ಇಮೇಲ್‌ನಲ್ಲಿ ಬೆದರಿಕೆ ಹಾಕಲಾಗಿತ್ತು.
ಈ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಬೆದರಿಕೆ ಇಮೇಲ್ ಕುರಿತು ದೂರು ದಾಖಲು ಮಾಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈಗಾಗಲೇ ಇಮೇಲ್ ಮೂಲವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದು ತಾಂತ್ರಿಕ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ದೇಶದಾದ್ಯಂತ ಕಳೆದ 48 ಗಂಟೆಗಳ ಅವಧಿಯಲ್ಲಿ ಸುಮಾರು 32 ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ಹಲವೆಡೆ ವಿಮಾನಗಳ ಹಾರಾಟ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಲಾಗಿದ್ದು ಪ್ರತಿಯೊಂದು ವಿಮಾನವನ್ನು ಕೂಲಂಕುಷವಾಗಿ ಪರಿಶೀಲಿಸಿ, ಸುರಕ್ಷತೆಯನ್ನು ಖಚಿತಪಡಿಸಿಕೊಂಡ ಬಳಿಕವೇ ಹಾರಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.