ವಿಜಯಪುರ: ನಮ್ಮ ಊಹೆಗೂ ನಿಲುಕದ ವಿಸ್ಮಯಗಳು ಪ್ರತಿನಿತ್ಯ ನಮ್ಮ ಸುತ್ತಲಿನ ಪ್ರಕೃತಿಯಲ್ಲಿ ನಡೆಯುತ್ತಲೇ ಇರುತ್ತವೆ. ವಿಜ್ಞಾನ-ತಂತ್ರಜ್ಞಾನಕ್ಕೂ ಸವಾಲೆಸೆಯುವಂತಿರುವ ಇಂತಹ ವಿಸ್ಮಯಗಳು ಕಣ್ಣಿಗೆ ಗೋಚರವಾದಾಗ ಎಲ್ಲರ ಗಮನ ಸೆಳೆಯುತ್ತವೆ. ಅಂತಹುದೇ ಒಂದು ವಿಸ್ಮಯಕಾರಿ, ವಿಚಿತ್ರ ಘಟನೆಯೊಂದಕ್ಕೆ ವಿಜಯಪುರ ಸಾಕ್ಷಿಯಾಗಿದೆ.
ತಾಲ್ಲೂಕಿನ ಬಾಬಾನಗರದ ನಿವಾಸಿ ಸಾವಿತ್ರಿ ಬಸವರಾಜ ನಾಗೂರಿ ಎಂಬುವವರ ಮನೆಯ ಹಸುವೊಂದು 3 ಕಣ್ಣುಗಳನ್ನು ಹೊಂದಿರುವ ಕರುವೊಂದಕ್ಕೆ ಜನ್ಮ ನೀಡಿದೆ. ಮೂರು ಕಣ್ಣು, ಎರಡು ನಾಲಿಗೆ ಹಾಗೂ ಎರಡು ಮೂಗುಗಳನ್ನು ಈ ಕರು ಹೊಂದಿದ್ದು, ಇದೀಗ ಗ್ರಾಮಸ್ಥರ ಅಚ್ಚರಿಯ ಕೇಂದ್ರಬಿಂದುವಾಗಿದೆ.
ವಿಚಿತ್ರ ಕರುವಿನ ಜನನದ ಬಳಿಕ ಮನೆಯವರು ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ವೈದ್ಯರು ಕರುವನ್ನು ಪರಿಶೀಲನೆ ನಡೆಸಿದ್ದಾರೆ. ಸದ್ಯ ಕರುವಿನ ಆರೋಗ್ಯ ಸ್ಥಿರವಾಗಿದ್ದು ಯಾವುದೇ ತೊಂದರೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಈ ಹಿಂದೆಯೂ ಸಹ ರಾಜ್ಯದ ವಿವಿಧೆಡೆ ಮೂರು ಕಣ್ಣು, ಎರಡು ತಲೆಯಂತಹ ವಿಚಿತ್ರ ದೇಹರೂಪವನ್ನು ಹೊಂದಿದ ಕರುಗಳ ಜನನವಾಗಿದೆ.
ಆದರೆ ವಿಜಯಪುರದಲ್ಲಿ ಈ ರೀತಿಯ ಕರು ಜನನವಾಗಿರುವುದು ಸುತ್ತಮುತ್ತಲಿನ ಜನರ ಕುತೂಹಲಕ್ಕೆ ಕಾರಣವಾಗಿದ್ದು, ಅಕ್ಕಪಕ್ಕದ ಗ್ರಾಮಗಳ ಜನರೂ ಸಹ ಇದೀಗ ವಿಚಿತ್ರ ಕರುವನ್ನು ವೀಕ್ಷಣೆ ಮಾಡಲು ಸಾವಿತ್ರಿ ಬಸವರಾಜ್ ಅವರ ಮನೆಗೆ ಮುಗಿಬಿದ್ದಿದ್ದಾರೆ.