ವಿಜಯಪುರ/ ಹುಬ್ಬಳ್ಳಿ: ಪ್ರಚೋದನಕಾರಿ, ಅವಾಚ್ಯಪದ ಬಳಸಿ ಭಾಷಣ ಮಾಡಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆದರೂ ಹುಬ್ಬಳ್ಳಿಯಲ್ಲಿ ಮಾತಾನಾಡಿದ ಯತ್ನಾಳ್ ಅವರು, ದೇಶದ ಮೇಲೆ ಮುಸ್ಲಿಮರಿಗೆ ಯಾವುದೇ ಅಧಿಕಾರವಿಲ್ಲ ಎಂದು ಅಬ್ಬರಿಸಿದ್ದಾರೆ.
ಹೌದು, ಅ.15ರಂದು ವಿಜಯಪುರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಬಳಿ ವಕ್ಫ್ ಹಠಾವೋ ದೇಶ್ ಬಚಾವೋ ಬಹಿರಂಗ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಾರೆಂದು ಆರೋಪಿಸಿ ಅ.18ರಂದು ಪ್ರಕರಣ ದಾಖಲಾಗಿದೆ.
ವಿಜಯಪುರ ಮಹಾನಗರ ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ಪರಶುರಾಮ ಹೊಸಮನಿ ಎನ್ನುವವರು ದೂರು ನೀಡಿದ್ದು, ಯತ್ನಾಳ್ ಅವರು ಹೆಣ್ಣುಮಕ್ಕಳ ವಿರುದ್ಧವೂ ಅವಾಚ್ಯವಾಗಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗಾಂಧಿ, ನೆಹರು ಅವರಿಂದ ದೇಶ ಹಾಳು:
ವಕ್ಫ್ ವಿವಾದದ ಕುರಿತು ಹುಬ್ಬಳ್ಳಿಯಲ್ಲಿ ಮಾತಾನಾಡಿದ ಯತ್ನಾಳ್ ಅವರು, ಸರ್ಕಾರ ಬರೀ ಮುಸ್ಲಿಮರ ಓಲೈಕೆಗೆ ನಿಂತಿದೆ. ಕರ್ನಾಟಕದಲ್ಲಿ 6.5 ಲಕ್ಷ ಎಕರೆ ಭೂಮಿಯನ್ನು ನಮ್ಮದು ಎಂದು ವಕ್ಫ್ ಕ್ಲೈಮ್ ಮಾಡುತ್ತಿದೆ. ಇಡೀ ದೇಶದಲ್ಲಿ ಲೆಕ್ಕ ಹಾಕಿದರೆ ಎರಡು ಪಾಕಿಸ್ತಾನ ಆಗುತ್ತವೆ ಅಷ್ಟು ಆಸ್ತಿಯನ್ನು ವಕ್ಫ್ ಅತಿಕ್ರಮ ಮಾಡಿದೆ. ಈ ಮುಸ್ಲಿಮರಿಗೆ ದೇಶದ ಮೇಲೆ ಯಾವುದೇ ಅಧಿಕಾರ ಇಲ್ಲ. ಗಾಂಧಿ ಮತ್ತು ನೆಹರು ಈ ದೇಶ ಹಾಳಾಗಲು ಕಾರಣ ಎಂದು ದೂರಿದ್ದಾರೆ.
ಆಗ ಇಸ್ಲಾಂ ಧರ್ಮ ಹುಟ್ಟಿರಲಿಲ್ಲ. ಅವರು ನಮ್ಮ ಮುಂದೆ ಕಣ್ಣಬಿಟ್ಟೋರು. ಟಿಪ್ಪು, ಆದಿಲ್ ಶಾಹಿ ಅಂತವರಿಗೆ ಹೆದರಿ ಜಮೀರ್ ಅಹಮ್ಮದ್ ಖಾನ್ ನಂತವರು ಮತಾಂತರ ಆಗಿದ್ದಾರೆ. ಹೀಗೆ ಬಿಟ್ಟರೆ ವಿಧಾನಸೌಧ, ಹೊಸ ಪಾರ್ಲಿಮೆಂಟ್ ಅನ್ನು ಕೇಳ್ತಾರೆ. ಅಫ್ಘಾನಿಸ್ತಾನದಿಂದ ಬಂದವರು, ಅಯೋಗ್ಯರು ಎಂದು ಕಿಡಿ ಕಾರಿದ್ದಾರೆ.