ಕೊಟ್ಟಾಯಂ: ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳು ತಮ್ಮ ಜ್ಯೂನಿಯರ್‌ಗಳನ್ನು ತಿಂಗಳುಗಟ್ಟಲೆ ಕ್ರೂರ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಪಡಿಸಿದ ಭೀಕರ ರ್ಯಾಗಿಂಗ್ ಪ್ರಕರಣವೊಂದು ಕೊಟ್ಟಾಯಂನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ.
ತಿರುವನಂತಪುರಂ ಮೂಲದ ಮೂವರು ಪ್ರಥಮ ವರ್ಷದ ವಿದ್ಯಾರ್ಥಿಗಳು ಕೊಟ್ಟಾಯಂ ಗಾಂಧಿನಗರ ಪೊಲೀಸರಿಗೆ ದೂರು ನೀಡಿದ್ದು, ನವೆಂಬರ್ 2024 ರಲ್ಲಿ ಪ್ರಾರಂಭವಾದ ಮತ್ತು ಸುಮಾರು ಮೂರು ತಿಂಗಳ ಕಾಲ ನಡೆದ ಹಿಂಸಾತ್ಮಕ ಕೃತ್ಯಗಳ ಸರಣಿಯನ್ನು ವಿವರಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಪೊಲೀಸರ ಪ್ರಕಾರ, ಮೊದಲ ವರ್ಷದ ವಿದ್ಯಾರ್ಥಿಗಳನ್ನು ಬೆತ್ತಲೆಯಾಗಿ ನಿಲ್ಲುವಂತೆ ಒತ್ತಾಯಿಸಲಾಯಿತು ಮತ್ತು ಅವರ ಹಿರಿಯರು ತಮ್ಮ ಖಾಸಗಿ ಭಾಗಗಳಿಗೆ ಡಂಬ್ಬೆಲ್ಗಳನ್ನು ನೇತು ಹಾಕಿದರು. ಅಲ್ಲದೇ ವಿದ್ಯಾರ್ಥಿಗಳ ಜಾಮಿಟ್ರಿ ಬಾಕ್ಸ್‌ನಿಂದ ದಿಕ್ಸೂಚಿ ಸೇರಿದಂತೆ ಚೂಪಾದ ವಸ್ತುಗಳನ್ನು ಬಳಸಿ ಹಿಂಸೆ ನೀಡಿದ್ದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಇಷ್ಟಕ್ಕೇ ನಿಲ್ಲದ ಸೀನಿಯರ್‌ಗಳು ಗಾಯಗಳಿಗೆ ಲೋಷನ್ ಹಾಕಿದ್ದು, ಇದು ಇನ್ನಷ್ಟು ನೋವನ್ನು ಉಂಟುಮಾಡಿತು. ವಿದ್ಯಾರ್ಥಿಗಳು ಯಾತನೆಯಿಂದ ಕೂಗಿದಾಗ, ಲೋಷನ್ ಅನ್ನು ಬಲವಂತವಾಗಿ ಅವರ ಬಾಯಿಗೆ ಹಾಕಲಾಯಿತು. ಅಲ್ಲದೇ ಸೀನಿಯರ್‌ಗಳು ಈ ಕೃತ್ಯಗಳನ್ನು ಚಿತ್ರೀಕರಿಸಿದ್ದಾರೆ ಮತ್ತು ರ್ಯಾಗಿಂಗ್ ಬಗ್ಗೆ ವರದಿ ಮಾಡಲು ಧೈರ್ಯ ಮಾಡಿದರೆ ಅವರ ಶೈಕ್ಷಣಿಕ ಭವಿಷ್ಯವನ್ನು ಹಾಳು ಮಾಡುವುದಾಗಿ ಹಾಗೂ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಹಿಂಸೆಗೊಳಗಾದ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಹಿರಿಯ ವಿದ್ಯಾರ್ಥಿಗಳು ಭಾನುವಾರದಂದು ಮದ್ಯ ಖರೀದಿಸಲು ಕಿರಿಯರ ಬಳಿ ಹಣ ವಸೂಲಿ ಮಾಡುತ್ತಿದ್ದರು ಮತ್ತು ಆಗಾಗ್ಗೆ ಅವರ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನು ಕಿರುಕುಳವನ್ನು ಸಹಿಸಲು ಸಾಧ್ಯವಾಗದ ಮೂವರು ವಿದ್ಯಾರ್ಥಿಗಳು ಅಂತಿಮವಾಗಿ ಕೊಟ್ಟಾಯಂ ಗಾಂಧಿನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ನಂತರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಿದ್ಯಾರ್ಥಿಗಳನ್ನು ಬುಧವಾರ ಬಂಧಿಸಲಾಯಿತು.
ಎರಡನೇ ವರ್ಷದ ಜನರಲ್ ನರ್ಸಿಂಗ್ ವಿದ್ಯಾರ್ಥಿಗಳಾದ ಸ್ಯಾಮ್ಯುಯೆಲ್ ಜಾನ್ಸನ್ (20) ಮತ್ತು ಜೀವಾ ಎನ್ಎಸ್ (19) ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳಾದ ರಾಹುಲ್ ರಾಜ್ ಕೆಪಿ, ರಿಜಿಲ್ಜಿತ್ ಸಿ (21) ಮತ್ತು ವಿವೇಕ್ ಎನ್ವೈ (21) ಬಂಧಿತ ಆರೋಪಿಗಳು.
ಕಾಲೇಜು ಪ್ರಾಂಶುಪಾಲರು 2011 ರ ರ್ಯಾಗಿಂಗ್ ನಿಷೇಧ ಕಾಯ್ದೆಯಡಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದಾರೆ.