ಬಳ್ಳಾರಿ,ಮಾ.30: 2 ಸಾವಿರಕ್ಕೂ ಹೆಚ್ಚು ವೈದ್ಯರನ್ನು, 700ಕ್ಕೂ ಹೆಚ್ಚು ಪ್ಯಾರಾಮೆಡಿಕಲ್,ನರ್ಸಿಂಗ್ ಸಿಬ್ಬಂದಿಗಳನ್ನು ತಿಂಗಳೊಳಗೆ ನೇರನೇಮಕಾತಿ ಮಾಡಿಕೊಳ್ಳುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು.
ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಸಾರ್ವಜನಿಕರ ಬಳಕೆಗೆ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂಆರ್‍ಐ), ಗ್ರಂಥಾಲಯ, ಉಪನ್ಯಾಸಕರ ಸಭಾಂಗಣ ಮತ್ತು ಪರೀಕ್ಷಾ ಸಭಾಂಗಣ, 300 ವಿದ್ಯಾರ್ಥಿಗಳ ಆಸನ ಸಾಮಥ್ರ್ಯದ ಉಪನ್ಯಾಸ ರಂಗಮಂದಿರ, ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ದಂತ ವೈದ್ಯಕೀಯ ಮಹಿಳಾ ವಿದ್ಯಾರ್ಥಿಗಳ ಹಾಸ್ಟಲ್‍ಗಳ ಶಂಕುಸ್ಥಾಪನೆಯನ್ನು ವರ್ಚುವಲ್ ತಂತ್ರಜ್ಞಾನದ ಮೂಲಕ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕುಳಿತು ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ವೈದ್ಯರಿಗೆ ಉತ್ತೇಜನ ನೀಡಲು ಬಡ್ತಿ ಮತ್ತು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದ್ದು,ನಿರ್ಧಿಷ್ಠ ಕಾನೂನುಗಳನ್ನು ಬದಲಾವಣೆ ಮಾಡುತ್ತಿದ್ದೇವೆ ಎಂದು ವಿವರಿಸಿದ ಸಚಿವ ಡಾ.ಸುಧಾಕರ್ ಅವರು ಖಾಸಗಿ-ಸರಕಾರಿ ಸಹಭಾಗಿತ್ವದಲ್ಲಿ ಆರೋಗ್ಯಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಎಸ್‍ಆರ್ ಸಮಿತಿ ರಚಿಸಲಾಗಿದ್ದು,ಗೀತಾಂಜಲಿ ಕಿರ್ಲೋಸ್ಕರ್ ಅವರನ್ನು ಗೌರವಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಆರೋಗ್ಯಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದರು.
ಈ ಹಿಂದೆ ಕಾರಾಗೃಹ ಕಟ್ಟಡವಾಗಿದ್ದ 173 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ವಿಮ್ಸ್ ತಲೆ ಎತ್ತಿದೆ. ಗತವೈಭವವನ್ನು ಆರೋಗ್ಯಕ್ಷೇತ್ರದಲ್ಲಿ ಮರುಕಳಿಸುವ ನಿಟ್ಟಿನಲ್ಲಿ ವಿಮ್ಸ್ ಸಂಸ್ಥೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿಮ್ಸ್ ಕೇವಲ ನಮ್ಮ ರಾಜ್ಯದ ಜನರಿಗೆ ಚಿಕಿತ್ಸೆ ನೀಡುವುದಕ್ಕೆ ಸೀಮಿತವಾಗಿಲ್ಲ;ಆಂಧ್ರಪ್ರದೇಶ ಮತ್ತು ತೆಲಂಗಾಣ ಜನರಿಗೆ ಚಿಕಿತ್ಸೆ ಪಡೆದುಕೊಳ್ಳುವ ಸಂಜೀವಿನಿಯಾಗಿದೆ ಎಂದರು.
ವಿಮ್ಸ್ ಸಂಸ್ಥೆಯನ್ನು ಏಮ್ಸ್ ಮಾದರಿಯನ್ನಾಗಿ ಪರಿವರ್ತಿಸಲು ಹಾಗೂ ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಾತಿಯನ್ನು 150ರಿಂದ 250ಕ್ಕೆ ಹೆಚ್ಚಿಸಿ ಉನ್ನತೀಕರಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು,ಈ ಪ್ರಸ್ತಾವನೆಗೆ ಸರಕಾರ ಸ್ಪಂದಿಸಿ ವಿಮ್ಸ್ ಸಂಸ್ಥೆಗೆ ಅವಶ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಕಟ್ಟಡ ಕಾಮಗಾರಿಗಳು ಮತ್ತು ಉಪಕರಣಗಳನ್ನು ಅಳವಡಿಸಿಲು ಅನುಮೋದನೆ ನೀಡಲಾಗಿದೆ ಎಂದರು.
ಪ್ರಸ್ತುತ ವಿಮ್ಸ್ ಸಂಸ್ಥೆಯ ಅಧೀನದಲ್ಲಿರುವ ಆಸ್ಪತ್ರೆಗೆ ಪ್ರತಿದಿನ 2 ಸಾವಿರ ಹೊರರೋಗಿಗಳು ಮತ್ತು 500ರಿಂದ 800ರವರೆಗೆ ಒಳರೋಗಿಗಳಾಗಿ ಚಿಕಿತ್ಸೆಗೆ ಬರುತ್ತಿರುತ್ತಾರೆ ಹಾಗೂ ಎಂಬಿಬಿಎಸ್ 150, ಬಿಡಿಎಸ್-50, ಪಿಜಿ-120, ಸೂಪರ್‍ಸ್ಪೇಶಾಲಿಟಿ-05, ಪ್ಯಾರಾಮೇಡಿಕಲ್-150, ಬಿಎಸ್‍ಸಿ ನರ್ಸಿಂಗ್-100+30 ವಿದ್ಯಾರ್ಥಿಗಳ ಪ್ರವೇಶಾತಿ ಸಾಮಥ್ರ್ಯ ಹೊಂದಿದೆ ಎಂದು ಅವರು ವಿವರಿಸಿದರು.
*ಸಚಿವ ಆನಂದಸಿಂಗ್ ನೇತೃತ್ವದಲ್ಲಿ ಹೊಸ ಜಿಲ್ಲೆ ಅಭಿವೃದ್ಧಿ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಅತ್ಯಂತ ಕ್ರಿಯಾಶೀಲರು;ಅವರ ನೇತ್ವತ್ವದಲ್ಲಿ 31ನೇ ಜಿಲ್ಲೆಯ ವಿಜಯನಗರ ಉದಯಿಸಿದೆ. ಈ ಹೊಸ ಜಿಲ್ಲೆ ಅವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದಲಿದೆ ಎಂಬ ಆಶಾಭಾವನೆಯನ್ನು ಸಚಿವ ಡಾ.ಸುಧಾಕರ್ ಅವರು ವ್ಯಕ್ತಪಡಿಸಿದರು.ಬಳ್ಳಾರಿ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಜಿಲ್ಲಾ ಖನಿಜ ನಿಧಿ ಅಡಿ ಬಹಳಷ್ಟು ಅನುದಾನವನ್ನು ಸಚಿವರು ನೀಡಿದ್ದಾರೆ;ಮುಂದಿನ ದಿನಗಳಲ್ಲಿಯೂ ನೀಡುವಂತೆ ಅವರು ಮನವಿ ಮಾಡಿದರು.
ಸಚಿವರು ವಿಮ್ಸ್‍ನ ಪ್ರಗತಿ ಪರಿಶೀಲನೆ ಸದಾ ನಡೆಸಲಿ ಮತ್ತು ಸ್ವಾಯತ್ತ ಸಂಸ್ಥೆಯಾಗಿರುವ ವಿಮ್ಸ್‍ನಲ್ಲಿ ಇದುವರೆಗೆ ಜಿಲ್ಲಾಧಿಕಾರಿಗಳು ಪ್ರಗತಿ ಪರಿಶೀಲನೆ ನಡೆಸುತ್ತಿರಲಿಲ್ಲ;ಅವರನ್ನು ಸಹ ಕೋ-ಚೆರ್ಮೆನ್ ಆಗಿ ಆದೇಶಿಸಲಾಗಿದ್ದು,ಅವರು ಸಹ ಇನ್ಮುಂದೆ ಪ್ರಗತಿ ಪರಿಶೀಲಿಸಲಿದ್ದಾರೆ ಎಂದರು.
*ಹಿರಿಯರನ್ನು ಕರೆತಂದು ಲಸಿಕೆ ಹಾಕಿಸಿ: ಆತ್ಮನಿರ್ಭರ್ ಭಾರತದಡಿ ಒಂದು ವರ್ಷದೊಳಗೆ ಲಸಿಕೆ ತಂದೆ ತರುತ್ತೇವೆ ಅಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ರು;10 ತಿಂಗಳೊಳಗೆ ಲಸಿಕೆಯನ್ನು ತಂದಿದ್ದಾರೆ. ಈ ಲಸಿಕೆ ತೆಗೆದುಕೊಳ್ಳುವುದಕ್ಕೆ ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟವರು ಲಸಿಕಾ ಕೇಂದ್ರಕ್ಕೆ ಬರಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು.ರಾಜ್ಯದಲ್ಲಿ ಪ್ರತಿದಿನ 3ಲಕ್ಷ ಲಸಿಕೆ ನೀಡುವುದಕ್ಕೆ ಸಾಮಥ್ರ್ಯ ಇದೆ;ಯುವಜನರು ತಮ್ಮ ಮನೆಯಲ್ಲಿರುವ ಹಿರಿಯರನ್ನು ಲಸಿಕಾಕೇಂದ್ರಕ್ಕೆ ಕರೆತರುವ ಕೆಲಸ ಮಾಡಬೇಕು ಎಂದರು.
*ಕೋವಿಡ್ 2ನೇ ಅಲೆ;ಹೆಚ್ಚಿನ ನಿಗಾವಹಿಸಿ: ಈಗಾಗಲೇ ಕೋವಿಡ್ 2ನೇ ಅಲೆ ಪ್ರಾರಂಭವಾಗಿರುವ ಹಿನ್ನೆಲೆ ಬಳ್ಳಾರಿ ಗಡಿಜಿಲ್ಲೆಯಾಗಿರುವುದರಿಂದ ಜಿಲ್ಲಾಡಳಿತ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸೂಚಿಸಿದರು.
ಜನತಾ ಕಫ್ರ್ಯೂ ಅನ್ನು ಸ್ವತಃ ನಾವೇ ವಿಧಿಸಿಕೊಳ್ಳುವುದರಿಂದ ಮಾತ್ರ 2ನೇ ಅಲೆ ತಡೆಯಲಿಕ್ಕೆ ಸಾಧ್ಯವಾಗಲಿದೆ ಎಂದು ಅವರು ಹೇಳಿದರು. ಮೂಲಭೂತ ಸೌಕರ್ಯ,ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಮಾತನಾಡಿ, ವಿಮ್ಸ್‍ನಲ್ಲಿ ಅಪರೇಶನ್ ಥಿಯಟೇರ್‍ಗೆ ಅವಶ್ಯಕತೆ ಇರುವುದರಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಕ್ಯಾಬಿನೆಟ್‍ನಲ್ಲಿ ಅನುಮೋದನೆ ದೊರಕಿದೆ;ಇದಕ್ಕೆ ವಿಶೇಷ ಜವಾಬ್ದಾರಿ ವಹಿಸಿ ಮಾಡುವಂತೆ ಅವರು ಸಚಿವ ಡಾ.ಸುಧಾಕರ್ ಅವರಲ್ಲಿ ಕೇಳಿಕೊಂಡರು.
ಹರಪನಹಳ್ಳಿ ಶಾಸಕ ಕರುಣಾಕರರೆಡ್ಡಿ ಮಾತನಾಡಿದರು. ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಶಾಸಕರಾದ ಕೆ.ಸಿ.ಕೊಂಡಯ್ಯ,ಅಲ್ಲಂ ವೀರಭದ್ರಪ್ಪ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹೆಚ್.ಹನುಮಂತಪ್ಪ, ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಸೇರಿದಂತೆ ಅನೇಕರು ಇದ್ದರು.