ನವದೆಹಲಿ: ಭಾರತೀಯ ಹವಾಮಾನ ಇಲಾಖೆ (IMD) ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗಿರುವ ಕಡಿಮೆ ಒತ್ತಡದ ಪರಿಣಾಮ ಬುಧವಾರದ ವೇಳೆಗೆ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಸೂಚನೆ ನೀಡಿದೆ. ‘ಡಾನಾ’ ಎಂದು ಹೆಸರಿಸಲಾದ ಚಂಡಮಾರುತವು ವಾಯುವ್ಯಕ್ಕೆ ಚಲಿಸುವ ಸಾಧ್ಯತೆಗಳಿದ್ದು, ಗುರುವಾರ ರಾತ್ರಿ ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳದ ನಡುವೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಗಾಳಿಯ ವೇಗ ಗಂಟೆಗೆ 120 ಕಿಲೋಮೀಟರ್‌ಗೆ ತಲುಪುವ ನಿರೀಕ್ಷೆಯಿದ್ದು, ಶುಕ್ರವಾರದ ಆರಂಭದಲ್ಲಿ ಚಂಡಮಾರುತವು ಪುರಿ ಮತ್ತು ಸಾಗರ್ ದ್ವೀಪದ ನಡುವಿನ ಕರಾವಳಿ ಪ್ರದೇಶಗಳನ್ನು ದಾಟಲಿದೆ ಎಂದು ಅಂದಾಜಿಸಲಾಗಿದೆ.
ಕಳೆದ ಆಗಸ್ಟ್‌ನಲ್ಲಿ ಅರೇಬಿಯನ್ ಸಮುದ್ರದ ಮೇಲೆ ಉದ್ಭವಿಸಿದ್ದ ‘ಅಸ್ನಾ’ ಚಂಡಮಾರುತದ ನಂತರ, ಎರಡು ತಿಂಗಳ ಅಂತರದಲ್ಲೇ ಉತ್ತರ ಹಿಂದೂ ಮಹಾಸಾಗರದ ಮೇಲೆ ರೂಪುಗೊಳ್ಳುತ್ತಿರುವ ಎರಡನೇ ದೊಡ್ಡ ಚಂಡಮಾರುತ ಡಾನಾ ಆಗಿದೆ. ಈ ಪ್ರದೇಶದಲ್ಲಿ ರೂಪುಗೊಳ್ಳುವ ಉಷ್ಣವಲಯದ ಚಂಡಮಾರುತಗಳನ್ನು ಹೆಸರಿಸುವ ರೂಢಿಯಂತೆ ಅರೇಬಿಕ್‌ನಲ್ಲಿ ‘ಉದಾರತೆ’ ಎಂಬ ಅರ್ಥವಿರುವ ‘ಡಾನಾ’ ಎಂಬ ಹೆಸರನ್ನು ಕತಾರ್ ಆಯ್ಕೆ ಮಾಡಿದೆ.
ಸೈಕ್ಲೋನ್‌ಗಳನ್ನು ಏಕೆ? ಮತ್ತು ಹೇಗೆ ಹೆಸರಿಸಲಾಗುತ್ತದೆ?:
ಸಂಖ್ಯೆಗಳು ಮತ್ತು ತಾಂತ್ರಿಕ ಪದಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಹೋಲಿಸಿದರೆ ಸೈಕ್ಲೋನ್‌ಗೆ ಹೆಸರನ್ನು ಇಡುವುದರಿಂದ ನೆನಪಿಟ್ಟುಕೊಳ್ಳುವುದು ಸುಲಭ. ಇದು ಜನಸಾಮಾನ್ಯರಿಗೆ ಮಾತ್ರವಲ್ಲದೇ, ವೈಜ್ಞಾನಿಕ ಸಮುದಾಯ, ವಿಪತ್ತು ನಿರ್ವಹಣೆಯ ತಂಡ ಮತ್ತು ಮಾಧ್ಯಮಗಳಿಗೂ ಸಹಾಯ ಮಾಡುತ್ತದೆ. ಹೆಸರಿನೊಂದಿಗೆ, ಸೈಕ್ಲೋನ್‌ಗಳನ್ನು ಪ್ರತ್ಯೇಕವಾಗಿ ಗುರುತಿಸುವುದರಿಂದ ಸಾರ್ವಜನಿಕರಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸುವುದು ಸುಲಭ. ಇದು ಎಚ್ಚರಿಕೆಗಳನ್ನು ನೀಡಲು, ತುರ್ತು ಸಂದರ್ಭದಲ್ಲಿ ಸೈಕ್ಲೋನ್ ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲು ಮತ್ತು ಒಂದು ಪ್ರದೇಶದಲ್ಲಿ ಅನೇಕ ಸೈಕ್ಲೋನ್‌ಗಳು ಎದುರಾದಾಗ ಗೊಂದಲ ಉಂಟಾಗದಂತೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ.
ಚಂಡಮಾರುತಗಳನ್ನು ಯಾರು ಹೆಸರಿಸುತ್ತಾರೆ:
ಕಳೆದ 2000ನೇ ಇಸವಿಯಿಂದ ವಿಶ್ವ ಹವಾಮಾನ ಸಂಸ್ಥೆ (WMO) ಮತ್ತು ಏಷ್ಯಾ ಪೆಸಿಫಿಕ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCAP) ಚಂಡಮಾರುತಗಳನ್ನು ಹೆಸರಿಸುತ್ತಿದೆ. WMO/ESCAP ಎಂದು ಕರೆಯಲ್ಪಡುವ ಈ ಗುಂಪು ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮಯನ್ಮಾರ್, ಓಮನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥೈಲ್ಯಾಂಡ್ ರಾಷ್ಟ್ರಗಳನ್ನು ಒಳಗೊಂಡಿದೆ. ಈ ದೇಶಗಳು 2000ರಲ್ಲಿ ತಮ್ಮ ಪ್ರದೇಶದಲ್ಲಿ ಚಂಡಮಾರುತಗಳಿಗೆ ಹೆಸರುಗಳನ್ನು ನೀಡಲು ನಿರ್ಧರಿಸಿದ್ದವು. 2018 ರಲ್ಲಿ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಇರಾನ್ ಮತ್ತು ಯೆಮೆನ್ ಈ ಐದು ದೇಶಗಳನ್ನು ಸೇರಿಸಿಕೊಳ್ಳುವ ಮೂಲಕ WMO/ESCAP ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಪ್ರತಿ ದೇಶದ ಸಲಹೆಗಳನ್ನು ಕಳುಹಿಸಿದ ನಂತರ, WMO/ESCAPನ ಪ್ಯಾನೆಲ್ ಆನ್ ಟ್ರಾಪಿಕಲ್ ಸೈಕ್ಲೋನ್ಸ್ (PTC) ಪಟ್ಟಿಯನ್ನು ಅಂತಿಮಗೊಳಿಸಿತ್ತು.
ಏಪ್ರಿಲ್ 2020 ರಲ್ಲಿ IMD ಬಿಡುಗಡೆ ಮಾಡಿದ 169 ಚಂಡಮಾರುತಗಳ ಪಟ್ಟಿಯ ಹೆಸರುಗಳನ್ನು ಉಲ್ಲೇಖಿಸಲಾದ ಎಲ್ಲಾ 13 ದೇಶಗಳು, 13 ಸಲಹೆಗಳೊಂದಿಗೆ ಒದಗಿಸಿವೆ. ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರ ಸೇರಿದಂತೆ ಉತ್ತರ ಹಿಂದೂ ಮಹಾಸಾಗರದ ಮೇಲೆ ರೂಪುಗೊಳ್ಳುವ ಚಂಡಮಾರುತಗಳನ್ನು ಹೆಸರಿಸುವ ಜವಾಬ್ದಾರಿಯನ್ನು ಭಾರತೀಯ ಹವಾಮಾನ ಇಲಾಖೆ (IMD) ಹೊಂದಿದೆ. ಇದು ಈ ಪ್ರದೇಶದ ಇತರೆ 12 ದೇಶಗಳಿಗೆ ಚಂಡಮಾರುತ ಮತ್ತು ಚಂಡಮಾರುತದ ಸಲಹೆಗಳನ್ನು ಒದಗಿಸುತ್ತದೆ.
ಚಂಡಮಾರುತವನ್ನು ಹೆಸರಿಸುವ ನಿಯಮಗಳು:
* ಹೆಸರು ರಾಜಕೀಯ, ರಾಜಕೀಯ ವ್ಯಕ್ತಿಗಳು, ಧಾರ್ಮಿಕ ನಂಬಿಕೆಗಳು, ಲಿಂಗಗಳು ಮತ್ತು ಸಂಸ್ಕೃತಿಗಳಿಗೆ ಸಂಬಂಧಪಟ್ಟಿರಬಾರದು.
* ಇದು ಜಗತ್ತಿನ ಯಾವುದೇ ಗುಂಪಿನ ಜನರ ಭಾವನೆಗಳಿಗೆ ಧಕ್ಕೆ ತರಬಾರದು.
* ಹೆಸರು ಅಸಭ್ಯ ಅಥವಾ ಕ್ರೂರವಾಗಿರಬಾರದು.
* ಇದು ಚಿಕ್ಕದಾಗಿರಬೇಕು, ಉಚ್ಚರಿಸಲು ಸುಲಭ ಮತ್ತು ಯಾವುದೇ PTC ಸದಸ್ಯರಿಗೆ ಆಕ್ಷೇಪಾರ್ಹವಾಗಿರಬಾರದು.
* ಇದು ಹೆಚ್ಚೆಂದರೆ ಎಂಟು ಅಕ್ಷರಗಳ ಉದ್ದವಿರಬೇಕು.
* ಇದನ್ನು ಉಚ್ಚಾರಣೆ ಮತ್ತು ಧ್ವನಿಯೊಂದಿಗೆ ಒದಗಿಸಬೇಕು.
* ಹೆಸರು ಪುನರಾವರ್ತನೆಯಾಗಬಾರದು.