ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಲಿ, ಬಿಡಲಿ. ನಾವು ಆಚರಣೆ ಮಾಡಿಯೇ ಮಾಡುತ್ತೇವೆ ಎಂದು ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಜಿಲ್ಲಾಡಳಿತಕ್ಕೆ ಸಡ್ಡು ಹೊಡೆದಿದೆ.
ಮಾಜಿ ಶಾಸಕ ಮನೋಹರ ಕಿಣೇಕರ ನೇತೃತ್ವದಲ್ಲಿ ಎಂಇಎಸ್ ಮುಖಂಡರ ಸಭೆ ನಡೆದಿದ್ದು, ಸಭೆಯಲ್ಲಿ ಮಾತನಾಡಿದ ಕಿಣೇಕರ, ಜಿಲ್ಲಾಡಳಿತ ಅನುಮತಿ ಕೊಡಲಿ, ಬಿಡಲಿ. ಕರಾಳ ದಿನಾಚರಣೆ ಮಾಡಿಯೇ ಮಾಡುತ್ತೇವೆ. ನಮ್ಮ ಹೋರಾಟವನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಾವು ಹೋರಾಟ ಮಾಡುತ್ತೇವೆ. ಕರಾಳ ದಿನಾಚರಣೆಗೆ ಗಡಿಭಾಗದಲ್ಲಿರುವ ಮರಾಠಿ ಭಾಷಿಕರು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಸೈಕಲ್ ರ್‍ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಈ ಮಧ್ಯೆ, ಎಂಇಎಸ್ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿಯವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಕರಾಳ ದಿನಾಚರಣೆಗೆ ಅನುಮತಿ ನೀಡುವಂತೆ ಕೋರಿ ಎಂಇಎಸ್ ನಾಯಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ತೆರಳಿದ್ದ ವೇಳೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಯಾವುದೇ ಕಾರಣಕ್ಕೂ ರಾಜ್ಯೋತ್ಸವದಂದು ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈಗ ಜಿಲ್ಲಾಡಳಿತಕ್ಕೆ ಸಡ್ಡು ಹೊಡೆಯಲು ಎಂಇಎಸ್ ಮುಂದಾಗಿದೆ.