ಭಟ್ಕಳ: ಕಾರಿನಲ್ಲಿ ಬಂದು ಜಾನುವಾರುಗಳನ್ನು ಕದ್ದೊಯ್ಯುತ್ತಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಮೂಲದ ಜಬ್ಬಾರ್ ಹುಸೇನ್ ಮಯದ್ದಿ ಬ್ಯಾರಿ, ಭಟ್ಕಳ ನಿವಾಸಿ ಜಲೀಲ್ ಹುಸೇನ್.ಪಿ.ಕೆ.ಮಯದ್ದಿ ಹಾಗೂ ತಾಲ್ಲೂಕಿನ ಹೆಬಳೆ ನಿವಾಸಿ ಮಹ್ಮದ್ ಹನೀಫ್ ಮೋಹಿದ್ದೀನ್ ಅಬ್ದುಲ್ ಖಾದರ್ ಜಾಮಿಯಾಬಾದ್ ಬಂಧಿತ ಆರೋಪಿಗಳಾಗಿದ್ದಾರೆ.
ಈ ಮೂವರೂ ಆರೋಪಿಗಳು ಕಳೆದ ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದು ಜಾಲಿ ಪಟ್ಟಣದ ಬ್ಯಾಂಕ್ ಸಮೀಪ ರಸ್ತೆಯಲ್ಲಿದ್ದ ಗೋವಿಗೆ ಆಹಾರ ನೀಡುವ ನೆಪದಲ್ಲಿ ಹತ್ತಿರ ತೆರಳಿ ಅದನ್ನು ಕಾರಿನಲ್ಲಿ ತುಂಬಿಕೊಂಡು ತೆರಳಿದ್ದರು. ಈ ವೇಳೆ ಸಮೀಪದ ಮನೆಯೊಂದರ ಸಿಸಿಕ್ಯಾಮೆರಾದಲ್ಲಿ ಗೋಕಳ್ಳತನ ದೃಶ್ಯಾವಳಿ ಸೆರೆಯಾಗಿತ್ತಾದರೂ ಆರೋಪಿಗಳು ಮುಖಕ್ಕೆ ಮುಸುಕು ಧರಿಸಿದ್ದರಿಂದ ಗುರುತು ಪತ್ತೆಯಾಗಿರಲಿಲ್ಲ.
ಭಟ್ಕಳ ವ್ಯಾಪ್ತಿಯಲ್ಲಿ ಗೋಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಹಿಂದೂ ಸಂಘಟನೆಗಳು ಹಾಗೂ ಸಾರ್ವಜನಿಕರು ಗೋಕಳ್ಳರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ನೀಡುವ ಮೂಲಕ ಆಗ್ರಹಿಸಿದ್ದರು. ಈ ಹಿನ್ನಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಭಟ್ಕಳ ಪೊಲೀಸರು ನಗರ ಠಾಣೆ ಸಿಪಿಐ ಗೋಪಿಕೃಷ್ಣ ಕೆ.ಆರ್ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಿ ಗೋಕಳ್ಳರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು.
ಗೋಕಳ್ಳತನ ನಡೆದ ಹಳೆಯ ಪ್ರಕರಣಗಳು ಸೇರಿದಂತೆ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸುತ್ತಾ ತನಿಖೆ ಮುಂದುವರೆಸಿದ ಪೊಲೀಸರಿಗೆ ಗೋಕಳ್ಳತನ ಪ್ರಕರಣದಲ್ಲಿ ಈ ಹಿಂದೆ ಸಿಕ್ಕಿಬಿದ್ದಿದ್ದ ಆರೋಪಿ ಜಬ್ಬಾರ್ ಹುಸೇನ್ ಮಯದ್ದಿ ಪಡುಬಿದ್ರಿಯಲ್ಲಿ ಇರುವುದು ಪತ್ತೆಯಾಗಿತ್ತು. ಅದರಂತೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇನ್ನಿಬ್ಬರು ಆರೋಪಿಗಳ ಕುರಿತು ಮಾಹಿತಿ ಲಭ್ಯವಾಗಿದ್ದು ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರೂ ಆರೋಪಿಗಳ ಹೆಡೆಮುರಿ ಕಟ್ಟಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.