ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಮಂಜೂರಾಗಿದ್ದ ತುರ್ತು ನಿಗಾ ಘಟಕ (ಐಸಿಯು) ಚಿಂತಾಮಣಿಗೆ ಶಿಫ್ಟ್ ಆಗಿದ್ದ ವಿಚಾರವಾಗಿ ಮಾಜಿ ಸಚಿವ ಹಾಗೂ ಹಾಲಿ ಸಚಿವರ ನಡುವೆ ಮಾತಿನ ಸಮರ ಮುಂದುವರಿದಿದ್ದು, ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಕ್ಕೆ ಸಚಿವರು ತಿರುಗೇಟು ನೀಡಿದ್ದಾರೆ.
ಹೌದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿರುವ ಮೆಡಿಕಲ್ ಕಾಲೇಜಿಗೆ 50 ಹಾಸಿಗೆಗಳ ತೀವ್ರ ನಿಗಾ ಘಟಕ ಮಂಜೂರಾಗಿತ್ತು. ಇದನ್ನು ಕಾಂಗ್ರೆಸ್ ಸರ್ಕಾರ ಕಳೆದ ಸಚಿವ ಸಂಪುಟ ಸಭೆಯಲ್ಲಿ ಚಿಂತಾಮಣಿಗೆ ಶಿಫ್ಟ್ ಮಾಡುವಂತೆ ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ವಿರುದ್ಧ ಮಾಜಿ ಆರೋಗ್ಯ ಸಚಿವ, ಸಂಸದ ಡಾ.ಕೆ.ಸುಧಾಕರ್ ಅವರು ಕಿಡಿಕಾರಿದ್ದರು.
ಫೇಸ್‌ಬುಕ್‌ನಲ್ಲಿ ಖಾತೆಯಲ್ಲಿ ಪ್ರಶ್ನೆ:
ಇದರ ಮುಂದುವರೆದ ಭಾಗವಾಗಿ ಸಂಸದ ಸುಧಾಕರ್ ಅವರು, ತಮ್ಮ ಫೇಸ್‌ಬುಕ್‌ನಲ್ಲಿ ಖಾತೆಯಲ್ಲಿ “ನೀವು ಜಿಲ್ಲೆಗೆ ಉಸ್ತುವಾರಿ ಸಚಿವರೋ ಇಲ್ಲ ತಮ್ಮ ಕ್ಷೇತ್ರಕ್ಕೆ ಮಾತ್ರ ಸಚಿವರೋ” ಎಂದು ಎಂ.ಸಿ. ಸುಧಾಕರ್ ಅವರನ್ನು ಪ್ರಶ್ನೆ ಮಾಡಿದ್ದರು. ಇದಕ್ಕೆ ಉನ್ನತ ಶಿಕ್ಷಣ ಸಚಿವರು ತಿರುಗೇಟು ಕೊಟ್ಟಿದ್ದು, “ಮೆಡಿಕಲ್ ಕಾಲೇಜು ಮಾಡಿದ್ದು ಜಿಲ್ಲಾ ಕೇಂದ್ರಕ್ಕೂ ಇಲ್ಲ ನಿಮ್ಮ ಗ್ರಾಮ ಪೆರೆಸಂದ್ರಕ್ಕೊ?” ಎಂದು ಪ್ರಶ್ನಿಸಿದ್ದಾರೆ.
ಸಚಿವರ ತಿರುಗೇಟು:
ಮೆಡಿಕಲ್ ಕಾಲೇಜಿಗೆ ಬರಬೇಕಾದರೆ ನಮಗೆ 60 ಕಿಲೋಮೀಟರ್ ದೂರ ಆಗುತ್ತದೆ. ಈ ಹಿಂದೆ ತಾವೇ ಆರೋಗ್ಯ ಸಚಿವರಾಗಿದ್ದೀರಿ ಆಗ ಎಷ್ಟು ಐಸಿಯು ಬೆಡ್‌ಗಳು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ತಂದಿದ್ದೀರಿ? ₹525 ಕೋಟಿ ಇದ್ದಂತ ಮೆಡಿಕಲ್ ಕಾಲೇಜು ಕಾಮಗಾರಿ ₹820 ಕೋಟಿ ಮಾಡಿದ್ದು ನೀವು. ನಿಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅದನ್ನು ಮಂಜೂರು ಮಾಡಿಸಿಕೊಳ್ಳಲು ಆಗಲಿಲ್ಲ. ನಿಮ್ಮವರೇ ಅದರ ಬಗ್ಗೆ ತನಿಖೆ ಮಾಡಬೇಕು ಅಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದರು. 50 ಬೆಡ್‌ಗಳಲ್ಲೂ ಐಸಿಯುನಲ್ಲಿ ಇಲ್ಲ. 10 ಬೆಡ್‌ಗಳು ಮಾತ್ರ ಐಸಿಯುನಲ್ಲಿವೆ ಎಂದಿದ್ದಾರೆ.
1 ಎಕರೆ ಜಾಗ ಇಲ್ಲ:
ಚಿಂತಾಮಣಿ ಪಟ್ಟಣವೂ ಇಡೀ ಜಿಲ್ಲೆಯಲ್ಲಿ ಹೆಚ್ಚು ಜನಸಂಖ್ಯೆ ಇರುವ ತಾಲೂಕಾಗಿದ್ದು, 50 ಬೆಡ್ ಆಸ್ಪತ್ರೆ ಮಾಡಬೇಕು ಅಂದ್ರೆ ಒಂದು ಎಕರೆ ಜಮೀನು ಬೇಕು. ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ ಬಳಿಯೂ ಜಾಗ ಇಲ್ಲ. ಮೆಡಿಕಲ್ ಕಾಲೇಜ್ ಬಳಿಯೂ ಜಾಗ ಇಲ್ಲ. ತುರ್ತಾಗಿ ಉಪಯೋಗಿಸಬೇಕಾಗಿರುವಂತ ಯೋಜನೆ ಕೂಡ ಇದಾಗಿದ್ದು, ಎಲ್ಲಾ ಸೌಲಭ್ಯಗಳಿರುವ ಚಿಂತಾಮಣಿಗೆ ಶಿಫ್ಟ್ ಮಾಡಲಾಗಿದೆ. ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಗೆ ಎಂಆರ್‌ಐ ಸ್ಕ್ಯಾನಿಂಗ್ ಸೇರಿ ಡಯಾಗ್ನೋಸ್ಟಿಕ್ ಕೇಂದ್ರಗಳನ್ನು ತಂದಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.