ನವದೆಹಲಿ: ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಸರ್ಕಾರ 2004ರಲ್ಲಿ ಜಾರಿಗೆ ತಂದಿದ್ದ ಮದರಸಾ ಕಾಯ್ದೆ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ಈ ಮೂಲಕ ‘ಮದರಸಾ ಕಾಯ್ದೆ ಸಂವಿಧಾನದ ಮೂಲ ಪರಿಕಲ್ಪನೆಯಾದ ಜಾತ್ಯತೀತ ತತ್ವಗಳ ಉಲ್ಲಂಘನೆ ಮಾಡುತ್ತದೆ. ಅದು ಅಸಾಂವಿಧಾನಿಕ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ವಜಾ ಮಾಡಿದೆ.
ಹೀಗಾಗಿ ಮುಚ್ಚುವ ಭೀತಿಯಲ್ಲಿದ್ದ ಉತ್ತರಪ್ರದೇಶದ 16000 ಮದರಸಾಗಳು ಮತ್ತು ಮದರಸಾಗಳಿಂದ ಸಾಮಾನ್ಯ ಶಿಕ್ಷಣಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಎದುರಿಸುತ್ತಿದ್ದ 17 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.
ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಕುರಿತು ಮಂಗಳವಾರ ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ, ‘ಯಾವುದೇ ಕಾಯ್ದೆಯನ್ನು, ಅದು ಶಾಸನದ ಬೆಂಬಲ ಹೊಂದಿಲ್ಲವೆಂದಾದಲ್ಲಿ ಮಾತ್ರ ವಜಾಗೊಳಿಸಬಹುದು. ಆದರೆ ಮದರಸಾ ಕಾಯ್ದೆ ಶಾಸನದ ಬೆಂಬಲ ಹೊಂದಿದೆ. ಮದರಸಾಗಳಲ್ಲಿ ಅಧುನಿಕ ಶಿಕ್ಷಣ ಇಲ್ಲ ಅಥವಾ ಐಚ್ಛಿಕ ಎನ್ನಬಹುದಾದರೂ, ಇಡೀ ಕಾಯ್ದೆಯ ಉದ್ದೇಶವೇ ಇಸ್ಲಾಂ ಅನ್ವಯ, ಅದರ ನಿಯಮಗಳ ಅನ್ವಯ, ಅದರ ತತ್ವಗಳ ಅನ್ವಯ ಶಿಕ್ಷಣ ನೀಡುವುದು ಮತ್ತು ಅದನ್ನು ಪ್ರಚುರಪಡಿಸುವುದಾಗಿದೆ. ಜೊತೆಗೆ ಮದರಸಾ ಕಾಯ್ದೆಯು, ಮದ್ರಸಾಗಳ ಮೂಲಕ ಬೋಧಿಸುವ ಶಿಕ್ಷಣವನ್ನು ನಿರ್ದಿಷ್ಟಗೊಳಿಸುವ ಉದ್ದೇಶ ಹೊಂದಿದೆ. ಹೀಗಾಗಿ ಕಾಯ್ದೆಯನ್ನು ಅಸಾಂವಿಧಾನಿಕ ಎನ್ನಲಾಗದು’ ಎಂದು ಸ್ಪಷ್ಟಪಡಿಸಿತು.