ನೇಮಕಾತಿ ಆರಂಭದ ಬಳಿಕ ನಿಯಮ ಬದಲಿಸಬಾರದು: ಸರ್ಕಾರಕ್ಕೆ ಸುಪ್ರೀಂ ಸೂಚನೆ

ನವದೆಹಲಿ: ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ಅದರ ಅರ್ಹತಾ ನಿಯಮಗಳನ್ನು ಬದಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಗುರುವಾರ ನ್ಯಾಯಾಲಯ ಈ ಆದೇಶ ನೀಡಿದೆ. ಆದರೆ, ಒಂದು ವೇಳೆ…

court judgement vijayaprabha news

ನವದೆಹಲಿ: ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ಅದರ ಅರ್ಹತಾ ನಿಯಮಗಳನ್ನು ಬದಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಗುರುವಾರ ನ್ಯಾಯಾಲಯ ಈ ಆದೇಶ ನೀಡಿದೆ. ಆದರೆ, ಒಂದು ವೇಳೆ ನೇಮಕಾತಿ ಸಂಬಂಧದ ಚಾಲ್ತಿ ನಿಯಮಗಳಲ್ಲಿ ಮತ್ತು ನೇಮಕಾತಿ ಕುರಿತ ಜಾಹೀರಾತಲ್ಲಿ, ಯಾವುದೇ ಹಂತದಲ್ಲಿ ಅರ್ಹತಾ ನಿಯಮ ಬದಲಿಸಬಹುದು ಎಂದು ಮೊದಲೇ ನಮೂದಿಸಿದ್ದರೆ ಆಗ ಅಂಥ ಬದಲಾವಣೆಗೆ ಅವಕಾಶ ಇದೆ ಎಂದು ನ್ಯಾಯಾಲಯ ಸ್ಪಷ್ಟನೆ ನೀಡಿದೆ.

ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ನಿಯಮಗಳ ಬದಲಾವಣೆಗೆ ಅವಕಾಶ ಕುರಿತು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಪ್ರತ್ಯೇಕ ಹೈಕೋರ್ಟ್‌ಗಳು ಭಿನ್ನ ತೀರ್ಪು ನೀಡಿದ್ದವು. ಹೀಗಾಗಿ 2013ರಲ್ಲಿ ಸುಪ್ರೀಂಕೋರ್ಟ್‌ನ ಮೂವರು ಸದಸ್ಯರ ನ್ಯಾಯಪೀಠ, ಪ್ರಕರಣವನ್ನು ಪಂಚ ಸದಸ್ಯ ಪೀಠಕ್ಕೆ ವರ್ಗಾಯಿಸಿತ್ತು.

Vijayaprabha Mobile App free

ಈ ಕುರಿತು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ಪಂಚ ಸದಸ್ಯರ ಸಾಂವಿಧಾನಿಕ ಪೀಠ, ‘ನೇಮಕಾತಿ ಪ್ರಕ್ರಿಯೆಯು ಅರ್ಜಿ ಆಹ್ವಾನಕ್ಕೆ ಜಾಹೀರಾತು ನೀಡುವುದರಿಂದ ಆರಂಭವಾಗಿ, ಹುದ್ದೆಗಳನ್ನು ತುಂಬುವುದರೊಂದಿಗೆ ಅಂತಿಮವಾಗುತ್ತದೆ. ನೇಮಕಾತಿ ಸಂಬಂಧ ಜಾಹೀರಾತಿನಲ್ಲಿ ನೀಡಿದ್ದ ಅರ್ಹತಾ ನಿಯಮಗಳನ್ನು ಒಮ್ಮೆ ಪ್ರಕ್ರಿಯೆ ಆರಂಭವಾದ ಬಳಿಕ ಬದಲಾವಣೆ ಮಾಡುವಂತಿಲ್ಲ’ ಎಂದಿತು.

‘ಆದರೆ, ಒಂದು ವೇಳೆ ಇಂಥ ಬದಲಾವಣೆಗೆ ಅವಕಾಶ ಇದೆ ಎಂದು ಚಾಲ್ತಿ ನಿಯಮಗಳಲ್ಲಿ ಪ್ರಸ್ತಾಪಿಸಿದ್ದರೆ ಅಥವಾ ಈ ಬಗ್ಗೆ ಜಾಹೀರಾತಿನಲ್ಲೇ ನಮೂದು ಮಾಡಿದ್ದರೆ ಆಗ ಅರ್ಹತಾ ನಿಯಮಗಳನ್ನು ಬದಲಾವಣೆ ಮಾಡಬಹುದು. ಜೊತೆಗೆ ಇಂಥ ನಿಯಮಗಳು ಕೂಡಾ ಸಂವಿಧಾನದ 14ನೇ ವಿಧಿಯಲ್ಲಿ ಪ್ರಸ್ತಾಪಿಸಿರುವ ಸಮಾನತೆಯ ಹಕ್ಕಿನ ಅರ್ಹತೆಗಳನ್ನು ಪೂರೈಸಿರಬೇಕು’ ಎಂದು ಸ್ಪಷ್ಟಪಡಿಸಿತು.

ಇದೇ ವೇಳೆ, ಆಯ್ಕೆ ಪಟ್ಟಿಯಲ್ಲಿ ಹೆಸರು ಸೇರಿದೆ ಎನ್ನುವ ಏಕೈಕ ವಿಷಯ ಯಾವುದೇ ಅಭ್ಯರ್ಥಿಗೆ ನೇಮಕದ ಹಕ್ಕನ್ನು ನೀಡುವುದಿಲ್ಲ. ಖಾಲಿ ಇರುವ ಹುದ್ದೆಯನ್ನು ತುಂಬದೇ ಬಿಡುವ ಅಧಿಕಾರ ಸರ್ಕಾರಗಳಿಗೆ ಇರುತ್ತದೆ. ಆದರೆ ಹಾಗೆಂದು ಹುದ್ದೆ ಖಾಲಿ ಇದ್ದ ಹೊರತಾಗಿಯೂ ಸರ್ಕಾರಗಳು, ಏಕಪಕ್ಷೀಯವಾಗಿ ಯಾವುದೇ ವ್ಯಕ್ತಿಗೆ ನೇಮಕಾತಿಯನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿತು.

ಈ ಮೂಲಕ ಸರ್ಕಾರಿ ನೇಮಕಾತಿಯಲ್ಲಿ ಅರ್ಹತೆಗಳನ್ನು ಬದಲಾವಣೆ ಮಾಡುವ ಕುರಿತು ಇದ್ದ ಗೊಂದಲಗಳಿಗೆ ಪರಿಹಾರ ನೀಡುವ ಕೆಲಸ ಮಾಡಿತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.