ನವದೆಹಲಿ: ಆರೋಪಿ ಮತ್ತು ಸಂತ್ರಸ್ತೆ ನಡುವೆ ಒಪ್ಪಂದ ಆಗಿದೆ ಎಂಬ ಕಾರಣ ನೀಡಿ ಆರೋಪಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಕೈಬಿಡಲಾಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲ್ಲದೆ ರಾಜಸ್ಥಾನದ ಆರೋಪಿ ವಿರುದ್ಧ ಕ್ರಿಮಿನಲ್ ಕಾನೂನುಗಳ ಅನ್ವಯ ವಿಚಾರಣೆ ಮುಂದುವರೆಸುವಂತೆ ಸೂಚಿಸಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಎರಡೂ ಪಕ್ಷಗಳ ನಡುವಿನ ಒಪ್ಪಂದದ ಕಾರಣ ನೀಡಿ ರದ್ದುಗೊಳಿಸುತ್ತಿರುವ ಹೊತ್ತಿನಲ್ಲೇ ನ್ಯಾಯಾಲಯದ ಈ ಆದೇಶ ಹೊರಬಿದ್ದಿದೆ.
ಪ್ರಕರಣ ಹಿನ್ನೆಲೆ:
ತನ್ನ 15 ವರ್ಷದ ಪುತ್ರಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ರಾಜಸ್ಥಾನದ ಪೋಷಕರೊಬ್ಬರು ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆಯೂ ಆರಂಭವಾಗಿತ್ತು. ಈ ನಡುವೆ ಆರೋಪಿ ಮತ್ತು ಸಂತ್ರಸ್ತೆ ಕುಟುಂಬದ ನಡುವೆ ಒಪ್ಪಂದ ಕುದುರಿತ್ತು. ಈ ಹಿನ್ನೆಲೆ ತನ್ನ ಮೇಲಿನ ಪ್ರಕರಣ ವಜಾ ಕೋರಿ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದ. ವಿಷಯ ಪರಿಶೀಲಿಸಿದ ಬಳಿಕ ಹೈಕೋರ್ಟ್ ಆತನ ಮೇಲಿನ ಪ್ರಕರಣ ಕೈಬಿಡಲು ಸೂಚಿಸಿತ್ತು.
ಆದರೆ ಪ್ರಕರಣದ ಜೊತೆ ಯಾವುದೇ ಸಂಬಂಧ ಹೊಂದಿರದ ರಾಮ್‌ಜೀ ಲಾಲ್ ಎಂಬುವವರು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕ್ರಿಮಿನಲ್ ದಾವೆಗಳಲ್ಲಿ ಸಂಬಂಧ ಇಲ್ಲದ ವ್ಯಕ್ತಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ಹೇಳಿ ಅರ್ಜಿ ದಾಖಲಿಗೆ ಮೊದಲಿಗೆ ಸುಪ್ರೀಂಕೋರ್ಟ್ ನಿರಾಕರಿಸಿತ್ತಾದರೂ ಬಳಿಕ ವಿಚಾರಣೆಗೆ ಸಮ್ಮತಿಸಿತ್ತು.
ಈ ಕುರಿತು ಇದೀಗ ತೀರ್ಪು ನೀಡಿರುವ ನ್ಯಾಯಾಲಯ, ಆರೋಪಿ ಮತ್ತು ಸಂತ್ರಸ್ತೆ ನಡುವೆ ಒಪ್ಪಂದ ಆಗಿದೆ ಎಂಬ ಅಂಶ, ಆರೋಪಿ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಕೈಬಿಡಲು ಕಾರಣವಾಗದು. ಹೀಗಾಗಿ ಕ್ರಿಮಿನಲ್ ಕಾನೂನುಗಳ ಅನ್ವಯ ಆರೋಪಿ ವಿರುದ್ಧ ವಿಚಾರಣೆ ಮುಂದುವರೆಸಬೇಕೆಂದು ಸೂಚಿಸಿತು, ಜೊತೆಗೆ ರಾಜಸ್ಥಾನ ಹೈಕೋರ್ಟ್ ಹೊರಡಿಸಿದ್ದ ಆದೇಶ ವಜಾಗೊಳಿಸಿತು.