ಉತ್ತರ ಕನ್ನಡ: ಜಿಲ್ಲೆಯಲ್ಲಿರುವ ಮುರುಡೇಶ್ವರದಲ್ಲಿ ₹360 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಇದು ನಿರ್ಮಾಣವಾದರೆ ೫೦೦ ಬೋಟ್‌ಹೌಸ್‌ಗಳನ್ನು ಲಂಗರು ಹಾಕಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ಹಂಚಿಕೊಂಡ ಅವರು, ಈ ಯೋಜನೆಯಿಂದ ಬೋಟ್‌ಹೌಸ್ ಪ್ರವಾಸೋದ್ಯಮ ಪ್ರಾರಂಭವಾಗಲಿದೆ. ಪ್ರವಾಸಿಗರು ಬಂದರೆ ಬೋಟ್‌ಹೌಸ್‌ನಲ್ಲೇ ಸಮುದ್ರದಲ್ಲಿ ತಂಗಬಹುದಾಗಿದೆ. ಮಂಗಳೂರಿನಲ್ಲಿ ₹೧೫೦೦ ಕೋಟಿ ವೆಚ್ಚದಲ್ಲಿ ಕ್ರೂಸ್ ಹಡಗು ಬರುವಂತೆ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಪ್ರವಾಸಿತಾಣಗಳ ಬಗ್ಗೆ ಆನ್‌ಲೈನ್‌ನಲ್ಲಿ ಎಲ್ಲ ಮಾಹಿತಿ ಸಿಗುವಂತೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಯಾರೋ ಹೇಳುತ್ತಾರೆ ಎಂದು ಕೇಳಲು ಹೋಗಬೇಡಿ. ಬಡವರಿಗೆ ಬದುಕಲು ಅವಕಾಶವಾಗುವಂತೆ ಪ್ರವಾಸೋದ್ಯಮ ಬೆಳೆಸುತ್ತೇವೆ ಎಂದು ಹೇಳಿದರು.
ಈ ಹಿಂದೆ 2018ರಲ್ಲಿ ತಾವು ಶಾಸಕರಿದ್ದಾಗ ಮುರುಡೇಶ್ವರದಲ್ಲಿ ಪ್ರವಾಸೋದ್ಯಮ ಬೆಳೆಯಲು ಅವಕಾಶ ಮಾಡಿಕೊಡಲಾಗಿದೆ. ನಾವು ಪ್ರವಾಸೋದ್ಯಮದ ಪರವಾಗಿದ್ದೇವೆ. ಟೂರಿಸ್ಟ್ ಬರಬೇಕು. ಖುಷಿಯಾಗಿ ಹೋಗಬೇಕು ಎನ್ನುವ ಮನೋಭಾವವಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ. ಆದರೆ ಕೆಲವರು ಮಂಕಾಳು ವೈದ್ಯ ಪ್ರವಾಸೋದ್ಯಮದ ವಿರೋಧಿ, ಪ್ರವಾಸೋದ್ಯಮ ಬೆಳೆಯಲು ಕೊಡುತ್ತಿಲ್ಲ ಎನ್ನುವಂತೆ ಹೇಳಿಕೆ ನೀಡಿದ್ದಾರೆ. ಏಕೆ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಪ್ರವಾಸೋದ್ಯಮ ಬೆಳೆದರೆ ನಿರುದ್ಯೋಗ ಸಮಸ್ಯೆಯೂ ಪರಿಹಾರವಾಗುತ್ತದೆ. ತಿಂಗಳಿಗೊಮ್ಮೆಯಾದರೂ ಸಭೆ ನಡೆಸಿ ಆಗಬೇಕಾದ ಕೆಲಸಗಳ ಬಗ್ಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಅಗತ್ಯ ಸಹಕಾರ ನೀಡುವುದಾಗಿ ತಿಳಿಸಲಾಗಿದೆ ಎಂದರು.
320 ಕಿಮೀ ಎಸ್‌ಎಂಪಿ:
ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಸಮಸ್ಯೆ ಜಿಲ್ಲೆಯಲ್ಲಿದೆ. ಕರಾವಳಿ ನಿರ್ವಹಣಾ ಯೋಜನೆ (ಎಸ್‌ಎಂಪಿ) ಮಾಡಿಲ್ಲವೆಂದು ಎನ್‌ಜಿಟಿಯಿಂದ ಆಕ್ಷೇಪವಿತ್ತು. 320 ಕಿಮೀ ಎಸ್‌ಎಂಪಿ ಮಾಡಿ ಕ್ಲಿಯರೆನ್ಸ್ ಸಿಕ್ಕಿದೆ ಎಂದ ಅವರು, ಮರಳುಗಾರಿಕೆ ಮೂರು ವರ್ಷದಿಂದ ನಡೆದಿರಲಿಲ್ಲ. ನಾವು ಬಂದಾಗ ಕಾನೂನಾತ್ಮಕವಾಗಿ ಅನುಮತಿಸಲಾಗಿತ್ತು. ಕೆಲವರು ಎನ್‌ಜಿಟಿ ಮೊರೆ ಹೋಗಿದ್ದಾರೆ. ಈ ಸಮಸ್ಯೆಯೂ ಬಗೆಹರಿಯುತ್ತದೆ. ಎಲ್ಲರ ಸಹಕಾರ ಇದ್ದರೆ ಎಲ್ಲವೂ ಸರಿಹೋಗುತ್ತದೆ ಎಂದು ತಿಳಿಸಿದರು.