ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿಮ, ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಬಗ್ಗೆ ರಾಜ್ಯಪಾಲ ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸುತ್ತೇವೆ. ಮುಡಾ ಹಗರಣದ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು, ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಇದೀಗ ಮುಡಾ ಮೇಲೆ ಇಡಿ ದಾಳಿ ನಡೆದಿದೆ. ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮುಡಾದಲ್ಲಿ 5 ಸಾವಿರ ಕೋಟಿ ಹಗರಣ ಆಗಿದೆ. ಸಿದ್ದರಾಮಯ್ಯ ಕುಟುಂಬದವರು ನೇರ ಫಲಾನುಭವಿ ಆಗಿದ್ದಾರೆ. ಸಾವಿರಾರು ಕೋಟಿ ಮೌಲ್ಯದ ಹಗರಣ ಆಗಿರುವ ಕಾರಣ ಸ್ವತಂತ್ರವಾದ ಸಿಬಿಐ ತನಿಖೆ ನಡೆಸಬೇಕು. ₹62 ಕೋಟಿ ಕೊಟ್ಟರೆ ಸೈಟ್ ಮರಳಿ ಕೊಡುವೆ ಅಂತ ಸಿದ್ದರಾಮಯ್ಯ ಅವರೇ ಹೇಳಿದ್ದರಿಂದ ಇ.ಡಿ. ತನಿಖೆ ಸೂಕ್ತವಾಗಿದೆ. ಮುಡಾ, ತಾಲೂಕು ಕಚೇರಿಗೆ ದಾಖಲಾತಿ ಕೊಡುವಂತೆ ಕೇಳಿದರೂ ಕೊಡದ ಕಾರಣ ಇ.ಡಿ. ದಾಳಿ ಮಾಡಿದೆ. ಈ ಹೋರಾಟದಲ್ಲಿ ನಾವು ಕಾನೂನಾತ್ಮಕವಾಗಿ ಮುಂದುವರೆಯುತ್ತೇವೆ ಎಂದರು.