ಕಾರವಾರ: ಕಾರವಾರದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಳಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದ್ದ ಸೇತುವೆ ಮಂಗಳವಾರ ತಡರಾತ್ರಿ ಕುಸಿದುಬಿದ್ದಿದ್ದು, ಘಟನೆಯಲ್ಲಿ ಲಾರಿ ಚಾಲಕನೊಬ್ಬ ಗಾಯಗೊಂಡಿದ್ದಾನೆಂದು ತಿಳಿದುಬಂದಿದೆ. ಕಾರವಾರ ಗೋವಾ ಸಂಪರ್ಕ ಮಾಡುವ ನಗರದ ಕೋಡಿಭಾಗ್ ಬಳಿ ಇರುವ ಈ ಸೇತುವೆ ಮಂಗಳವಾರ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ಕುಸಿದು ಬಿದ್ದಿದೆ.
ಫಿಲ್ಲರ್ ಕಂಬಗಳ ನಡುವೆ ಸೇತುವೆ ಮೂರ್ನಾಲ್ಕು ಕಡೆ ತುಂಡಾಗಿ ನದಿಗೆ ಬಿದ್ದಿದ್ದು, ಇದೇ ವೇಳೆ ಗೋವಾದಿಂದ ಕಾರವಾರ ಕಡೆಗೆ ಆಗಮಿಸುತ್ತಿದ್ದ ಟ್ರಕ್ ನದಿಗೆ ಬಿದ್ದಿದೆ. ತಕ್ಷಣ ಮೀನುಗಾರರು ಹಾಗೂ ಪೋಲಿಸರು ಲಾರಿ ಚಾಲಕನನ್ನು ರಕ್ಷಣೆ ಮಾಡಿದ್ದಾರೆ.
ಗಾಯಗೊಂಡಿರುವ ವ್ಯಕ್ತಿಯನ್ನು ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ (37) ಎಂದು ಗುರ್ತಿಸಲಾಗಿದೆ. ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇನ್ನು ಘಟನೆ ಸಂಭವಿಸುವ ವೇಳೆ ಬೈಕ್ ಹಾಗೂ ಕಾರು ಕೂಡ ಇದೇ ಸೇತುವೆ ಮೇಲೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದ್ದು ಅವರು ಮುಂದೆ ಸಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಟ್ರಕ್ ನೀರಿನಲ್ಲಿ ಬಿದ್ದಿದ್ದು ಮತ್ತೆ ಯಾವುದಾದರೂ ವಾಹನ ಬಿದ್ದಿರುವ ಬಗ್ಗೆ ಸ್ಥಳೀಯ ಮೀನುಗಾರರ ಜೊತೆ ಪೊಲೀಸರು ದೋಣಿಗಳ ಮೂಲಕ ಹುಡುಕಾಟ ನಡೆಸಿದ್ದಾರೆ.