ಹೈದರಾಬಾದ್: ಹಿಂದೂಗಳ ಶ್ರದ್ಧಾ ಕೇಂದ್ರ ಸಿಕಂದರಬಾದಿನ ಮುತ್ಯಾಲಮ್ಮ ದೇವಸ್ಥಾನದಲ್ಲಿದ್ದ ದೇವಿಯ ಮೂರ್ತಿಯನ್ನು ಕಿಡಿಗೇಡಿಯೊಬ್ಬ ಕಾಲಿನಿಂದ ಒದ್ದು ಧ್ವಂಸಗೊಳಿಸಿದ್ದು, ಈ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ದೇಗುಲದ ಬಳಿಗೆ ಆಗಮಿಸಿದ್ದರು. ಈ ವೇಳೆ ಜನರು ಜಮಾಯಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಿಸಿಟಿವಿಯಲ್ಲಿ ಈ ದೃಶ್ಯ ಆಧರಿಸಿ ವಿಗ್ರಹ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ದೇಗುಲಗಳಿಗೆ ಭದ್ರತೆ ಕೊಡಿ: ಬಿಜೆಪಿ ರಾಜ್ಯಾಧ್ಯಕ್ಷ ಆಗ್ರಹ
ಇನ್ನು ಘಟನಾ ಸ್ಥಳಕ್ಕೆ ಕೇಂದ್ರ ಸಚಿವ, ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ. ಕಿಶನ್ ರೆಡ್ಡಿ ಭೇಟಿ ನೀಡಿದ್ದು, ಹಿಂದೂಗಳ ಭಾವನೆಗೆ ದಕ್ಕೆ ಉಂಟು ಮಾಡಿದ ದುಷ್ಕರ್ಮಿಗಳ ವಿರುದ್ಧ ಕಾಂಗ್ರೆಸ್ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ‘ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ವಿಗ್ರಹಕ್ಕೆ ಹಾನಿಯುಂಟು ಮಾಡಿದವರನ್ನು ಶಿಕ್ಷಿಸಬೇಕು ಎಂದು ಹಾರೈಸುತ್ತೇನೆ. ಹಿಂದೂ ದೇವಾಲಯಗಳಿಗೆ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ’ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಸುರಕ್ಷಿತವಲ್ಲ: ಆರೋಪ
ಇನ್ನೂ ತೆಲಂಗಾಣ ಬಿಜೆಪಿ ವಕ್ತಾರ ತುಳ್ಳ ವೀರೇಂದ್ರ ಗೌಡ್ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳು ಮತ್ತು ಅವರ ದೇವಾಲಯಗಳು ಸುರಕ್ಷಿತವಾಗಿಲ್ಲ. ಇಂತಹ ಘಟನೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ತೆಲಂಗಾಣದಲ್ಲಿ ಹಿಂದೂ ದೇವಾಲಯಗಳ ಮೇಲಿನ ಮತ್ತೊಂದು ದಾಳಿಯಾಗಿದ್ದು, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಶೀಘ್ರವಾಗಿ ಕ್ರಮವಹಿಸಿ ಅಪರಾಧಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.