ಬೆಂಗಳೂರು: ಬಹ್ರೇನ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ ₹9.8 ಲಕ್ಷ ಪಡೆದು ವಂಚಿಸಿದ ಆರೋಪದಡಿ ಐವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಂಚನೆಗೆ ಒಳಗಾದ ಚಿಕ್ಕಬಾಣವಾರ ಗಾಣಿಗರಹಳ್ಳಿ ಗಣಪತಿನಗರ ನಿವಾಸಿ ಶ್ರೀಪಾದ ಭಟ್ (34) ನೀಡಿದ ದೂರಿನ ಮೇರೆಗೆ ಕೊಪ್ಪಳ ಮೂಲದ ಅಪ್ರಮೆಯ, ಸುಳ್ಯ ಮೂಲದ ಪ್ರವೀಣ್, ಪ್ರೀತಮ್ ಶೆಟ್ಟಿ, ಕುಂದಾಪುರ ಮೂಲದ ಮಮತಾ ಶೆಟ್ಟಿ ಹಾಗೂ ಬೆಂಗಳೂರಿನ ಪ್ರಸನ್ನ ವಿರುದ್ಧ ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂಚನೆಗೆ ಹೇಗೆ ಒಳಗಾದರು:
ಶ್ರೀಪಾದ್ ಭಟ್ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಅಜಯ್ ಎಂಬ ಸ್ನೇಹಿತ ಅಪ್ರಮೆಯ ಎಂಬುವವರನ್ನು ಶ್ರೀಪಾದ ಭಟ್‌ಗೆ ಪರಿಚಯಿಸಿದ್ದರು. ಈ ಅಪ್ರಮೆಯ ದೂರವಾಣಿ ಕರೆ ಮಾಡಿ ಪ್ರವೀಣ್ ಎಂಬುವವರನ್ನು ಶ್ರೀಪಾದ್ ಭಟ್‌ಗೆ ಪರಿಚಯಿಸಿದ್ದರು. ಈ ವೇಳೆ ಪ್ರವೀಣ್, ನಾನು ಬಹ್ರೇನ್ ದೇಶದಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾರೆ. ಬಳಿಕ ಪ್ರವೀಣ್, ನಿಮಗೂ ಬಹ್ರೇನ್ ದೇಶದಲ್ಲಿ ಕೆಲಸ ಕೊಡಿಸುವುದಾಗಿ ಶ್ರೀಪಾದ್ ಭಟ್‌ಗೆ ನಂಬಿಸಿ, ವಿವಿಧ ಹಂತಗಳಲ್ಲಿ ಅಪ್ರಮೆಯ, ಪ್ರವೀಣ್, ಪ್ರೀತಮ್ ಶೆಟ್ಟಿ, ಮಮತಾ ಶೆಟ್ಟಿ ಹಾಗೂ ಪ್ರಸನ್ನ ಎಂಬುವವರು ₹9.8 ಲಕ್ಷ ಪಡೆದುಕೊಂಡಿದ್ದಾರೆ.
ಹಣ ನೀಡಿದ ಬಳಿಕ ಶ್ರೀಪಾದ್ ಭಟ್ ಅವರು ಈ ಆರೋಪಿಗಳ ಜತೆಗೆ ದೂರವಾಣಿ ಸಂಪರ್ಕದಲ್ಲಿದ್ದರು. ಆದರೆ, ಹಲವು ತಿಂಗಳು ಕಳೆದರೂ ಆರೋಪಿಗಳು ಶ್ರೀಪಾದ್ ಭಟ್‌ಗೆ ಯಾವುದೇ ಕೆಲಸ ಕೊಡಿಸಿಲ್ಲ. ಹಣವನ್ನೂ ವಾಪಾಸ್ ನೀಡಿಲ್ಲ. ಹೀಗಾಗಿ ಶ್ರೀಪಾದ್ ಭಟ್ ಅವರು ಈ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.