ಬೆಂಗಳೂರು: ಜಾಮೀನು ನಿರೀಕ್ಷೆಯಲ್ಲಿರುವ ಅತ್ಯಾಚಾರ ಪ್ರಕರಣಗಳ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಹಿನ್ನಡೆಯಾಗಿದೆ. ಅವರು ಸಲ್ಲಿಕೆ ಮಾಡಿದ್ದ ಒಂದು ಜಾಮೀನು ಮತ್ತು ಎರಡು ನಿರೀಕ್ಷಣಾ ಜಾಮೀನುಗಳ ಅರ್ಜಿಗಳನ್ನು ಸೋಮವಾರ ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಉಳಿದಂತೆ ನಿರೀಕ್ಷಣಾ ಜಾಮೀನಿಗೆ ಸಲ್ಲಿಸಲಾಗಿದ್ದ ಇನ್ನೊಂದು ಅರ್ಜಿಯ ಆದೇಶ ಪ್ರಕಟವಾಗುವುದು ಮಾತ್ರ ಬಾಕಿ ಉಳಿದಿದೆ.
ಮೂರು ಅತ್ಯಾಚಾರ ಮತ್ತು ಒಂದು ಲೈಂಗಿಕ ದೌರ್ಜನ್ಯ ಹಾಗೂ ಮಹಿಳೆಯ ಗೌರವಕ್ಕೆ ಧಕ್ಕೆ ಉಂಟುಮಾಡಿರುವ ಆರೋಪಗಳ ಮೇಲೆ ಪ್ರಜ್ವಲ್ ವಿರುದ್ಧ ಪ್ರತ್ಯೇಕವಾಗಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಜಾಮೀನು ಕೋರಿದ್ದ ಮೂರು ಪ್ರಕರಣಗಳ ಅರ್ಜಿಗಳನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿದ್ದು, ವಿಸ್ತ್ರತ ಆದೇಶಗಳು ಬಿಡುಗಡೆಯಾಗಬೇಕಿದೆ.
ಮನೆಗೆಲಸದಾಕೆ, ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ನೀಡಿದ ದೂರಿನನ್ವಯ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ, ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿದ್ದ, ಮೊದಲನೇ ಆರೋಪಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣಗೆ ಈಗಾಗಲೇ ಜಾಮೀನು ಮಂಜೂರಾಗಿದ್ದು, ಪ್ರಜ್ವಲ್ ಎರಡನೇ ಆರೋಪಿಯಾಗಿದ್ದಾರೆ.
ಹೊಳೆನರಸೀಪುರದಲ್ಲಿ, ಎಂಎಲ್‌ಸಿ ಸೂರಜ್ ರೇವಣ್ಣಗೆ ಸೇರಿದ ಗನ್ನಿಗಡ ತೋಟದ ಮನೆಯ ಕೆಲಸದಾಕೆ ನೀಡಿದ ದೂರಿನಡಿ ದಾಖಲಾಗಿರುವ ಅತ್ಯಾಚಾರ ಪ್ರಕರಣ, ಹಾಗೂ ಹಾಸನದ ಮಹಿಳೆಗೆ, ಪುತ್ರನಿಗೆ ಪ್ರತಿಷ್ಠಿತ ಶಾಲೆಯಲ್ಲಿ ಸೀಟು ಕೊಡಿಸುವ ಆಮಿಷವೊಡ್ಡಿ ಆಕೆಯ ನಗ್ನ ವೀಡಿಯೋ ಸೆರೆಹಿಡಿದ ಆರೋಪ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಪ್ರಜ್ವಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಬೆಂಗಳೂರಿನ ಸಿಐಡಿ ಸೈಬರ್ ಠಾಣೆಯಲ್ಲಿ ಈ ಎರಡೂ ಪ್ರಕರಣಗಳು ದಾಖಲಾಗಿವೆ.
ಉಳಿದಂತೆ ಹಾಸನ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿ, ನ್ಯಾಯಾಲಯ ಇನ್ನೆರಡು ದಿನದಲ್ಲಿ ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.
ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿಶೇಷ ತನಿಖಾ ದಳದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರೋ.ರವಿವರ್ಮ ಕುಮಾರ ವಾದ ಮಂಡಿಸಿದ್ದರೆ, ಪ್ರಜ್ವಲ್ ಪರವಾಗಿ ವಕೀಲರಾದ ಜಿ.ಅರುಣ್ ವಕಾಲತ್ತು ಹಾಕಿ, ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದಿಸಿದ್ದರು.