ಉತ್ತರ ಪ್ರದೇಶ: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಹೊಸದಾಗಿ ಮದುವೆಯಾದ ವರ ಚಿರನಿದ್ರೆಗೆ ಹೋದ ಧಾರುಣ ಘಟನೆ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬರೇಲಿಯ ಸತೀಶ್ ಎಂಬ ಯುವಕ ಬುಧವಾರ ಸ್ವಾತಿ ಎಂಬ ಯುವತಿಯೊಂದಿಗೆ ವಿವಾಹವಾದರು. ಈ ಸಂತೋಷದ ಮಧ್ಯೆ, ಸತೀಶ್ ಮತ್ತು ಅವನ ಮೂವರು ಸ್ನೇಹಿತರು ಮನೆಯಲ್ಲಿರುವ ಸಂಬಂಧಿಕರಿಗೆ ಸಿಹಿತಿಂಡಿಗಳನ್ನು ತರಲು ಕಾರಿನಲ್ಲಿ ನಗರದ ಕಡೆಗೆ ಹೋಗುತ್ತಿದ್ದರು. ಈ ಸಮಯದಲ್ಲಿ, ಸತೀಶ್ ಚಾಲನೆ ಮಾಡುತ್ತಿದ್ದ ಕಾರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ, ಸತೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇತರ ಮೂವರು ಸ್ನೇಹಿತರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಏತನ್ಮಧ್ಯೆ, ಮನೆಯಲ್ಲಿ ಸತೀಶ್ ಸಾವಿನ ಸುದ್ದಿ ಬೆಳಕಿಗೆ ಬಂದ ತಕ್ಷಣ, ಸಂಭ್ರಮಾಚರಣೆಯ ಸ್ಥಿತಿಯಲ್ಲಿದ್ದ ಮನೆ ಶೋಕಾಚರಣೆಯ ಸಾಗರವಾಯಿತು. ಒಂದೆಡೆ ಮದುವೆಯ ದಿನವೇ ಗಂಡನನ್ನು ಕಳೆದುಕೊಂಡ ಪತ್ನಿ, ಮತ್ತೊಂದೆಡೆ ಮಗನನ್ನು ಕಳೆದುಕೊಂಡ ಪೋಷಕರು ಆಘಾತಕ್ಕೊಳಗಾಗಿದ್ದರು.
ಅಪಘಾತದ ತೀವ್ರತೆಯಿಂದಾಗಿ ಕಾರು ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.