ಬೆಂಗಳೂರು: ವಿದ್ಯಾರ್ಥಿನಿಯರನ್ನು ಕ್ಯಾಬಿನ್‌ಗೆ ಕರೆಸಿಕೊಂಡು ಅವರ ಅಂಗಾಂಗಳನ್ನು ಮುಟ್ಟಿ, ವರ್ಣಿಸಿ ವಿಕೃತಿ ಮೆರೆಯುತ್ತಿದ್ದ ಶಾಲಾ ಮಾಲೀಕನನ್ನು ಬಂಧಿಸಲಾಗಿದೆ. ನೆಲಮಂಗಲದ ಕಿತ್ತನಹಳ್ಳಿಯ ವಿಭಾ ಇಂಟರ್ನ್ಯಾಷನಲ್ ಶಾಲಾ ಮಾಲೀಕ ಈರತ್ತಯ್ಯನ ಬಂಧಿತ ಆರೋಪಿಯಾಗಿದ್ದಾನೆ. ಈತ ಕಳೆದ ನಾಲ್ಕು ತಿಂಗಳಿನಿಂದ ಶಾಲೆಯ ವಿದ್ಯಾರ್ಥಿನಿಯರ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ.
ಆರೋಪಿ ಈರತ್ತಯ್ಯ ತನ್ನ ಕ್ಯಾಬಿನ್‌ಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅವರ ಅಂಗಾಂಗಳನ್ನು ಸ್ಪರ್ಷಿಸಿ ವಿಕೃತಿ ಮೆರೆಯುತ್ತಿದ್ದ. ಅಲ್ಲದೇ ಅವರ ಅಂಗಾಂಗಗಳನ್ನು ಹಣ್ಣುಗಳಿಗೆ ಹೋಲಿಸಿ ವರ್ಣನೆ ಮಾಡಿ ವಿಕೃತ ಆನಂದ ಪಡುತ್ತಿದ್ದ. ವಿದ್ಯಾರ್ಥಿನಿಯರು ತಮಗಾದ ಕಿರುಕುಳವನ್ನು ದೂರಿನಲ್ಲಿ ವಿವರಿಸಿದ್ದಾರೆ.
ಓರ್ವ ವಿದ್ಯಾರ್ಥಿನಿ ಹೇಳುವಂತೆ, ಕಳೆದ 2 ತಿಂಗಳ ಹಿಂದೆ ಆಕೆಯನ್ನು ಕ್ಯಾಬಿನ್‌ಗೆ ಕರೆಸಿಕೊಂಡಿದ್ದ ಈರತ್ತಯ್ಯ, ತನಗೆ ಆಸೆಯಾಗಿ ಕರೆದರೆ ಬರುತ್ತೀಯಾ ಎಂದು ಕೇಳಿದ್ದನಂತೆ. ಅಲ್ಲದೇ ನಿನಗೆ ಅಪ್ಪನ ಪ್ರೀತಿ ಬೇಕಾ? ಅಥವಾ ನನ್ನ ಪ್ರೀತಿ ಬೇಕಾ ಎಂದು ಕೇಳಿದ್ದ. ಶಾಲೆಯ ಮಾಲೀಕರು ಎಂದು ಭಯಪಟ್ಟು ಸುಮ್ಮನಾಗಬೇಕಾಗಿತ್ತು. ಮಾಲೀಕನ ಕಿರುಕುಳ ಸಹಿಸಿಕೊಂಡು ಸಾಕಾಗಿತ್ತು ಎಂದು ವಿದ್ಯಾರ್ಥಿನಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾಳೆ.
ಪ್ರಕರಣ ಸಂಬಂಧ ಮಾದನಾಯಕನಹಳ್ಳಿಯ ಪೊಲೀಸರು ಆರೋಪಿ ಈರತ್ತಯ್ಯನನ್ನು ಬಂಧಿಸಿ ಪ್ರಾಥಮಿಕ ಹಂತದ ತನಿಖೆ ನಡೆಸಿ ಆತನನ್ನು ಜೈಲಿಗೆ ಕಳುಹಿಸಿದ್ದಾರೆ.