ಚಿಕ್ಕೋಡಿ: ವಸತಿ ಶಾಲೆಯಲ್ಲಿದ್ದ ವಿದ್ಯಾರ್ಥಿನಿ ಮೊದಲ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಹಿರೇಕೋಡಿಯಲ್ಲಿ ನಡೆದಿದೆ. ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದ ಆಫ್ರೀನ್ ಜಮಾದಾರ(17) ಮೃತ ದುರ್ದೈವಿ ವಿದ್ಯಾರ್ಥಿನಿಯಾಗಿದ್ದಾಳೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಶಿಂದಿ ಕುರಬೇಟ್ ಗ್ರಾಮದ ನಿವಾಸಿಯಾಗಿದ್ದ ಆಫ್ರೀನ್ ಮೊರಾರ್ಜಿ ವಸತಿ ಶಾಲೆಯಲ್ಲಿದ್ದು ಓದಿಕೊಂಡಿದ್ದಳು. ಇಂದು ಪರೀಕ್ಷೆ ಇದ್ದ ಹಿನ್ನಲೆ ವಿದ್ಯಾರ್ಥಿನಿ ಮೊದಲ ಮಹಡಿಯಲ್ಲಿ ಕುಳಿತು ತಡರಾತ್ರಿವರೆಗೆ ಓದುತ್ತಿದ್ದಳು. ಈ ವೇಳೆ ವಿದ್ಯಾರ್ಥಿನಿ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ವಿದ್ಯಾರ್ಥಿನಿ ಸಾವಿನ ಹಿನ್ನಲೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವಸತಿ ಶಾಲೆಗೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿನಿ ಮೃತದೇಹವನ್ನು ತಾಲ್ಲೂಕಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದ್ದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.