ಕಲಬುರಗಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಕೇಸ್ ಕುರಿತು ತನಿಖೆ ನಡೆಸಲು ಅವಕಾಶ ನೀಡುವಂತೆ ಸಿಬಿಐ ಸುಪ್ರಿಂ ಕೋರ್ಟ್ ಎದುರು ಅರ್ಜಿ ಸಲ್ಲಿಸಿದ್ದು, ನವೆಂಬರ್ ಮೊದಲ ವಾರದಲ್ಲಿ ವಿಚಾರಣೆ ನಡೆಯಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಎದುರು ನಾನು ಮೊದಲು ಅರ್ಜಿ ಹಾಕಿದ್ದೆ. ಈಗ ಸಿಬಿಐ ಅಧಿಕಾರಿಗಳು ಬಹಳಷ್ಟು ಯೋಚಿಸಿ ಡಿಕೆಶಿ ವಿಚಾರಣೆಗೆ ಅವಕಾಶ ಕೋರಿ ಅರ್ಜಿ ಹಾಕಿದ್ದಾರೆ. ಇಷ್ಟು ತಡ ಏಕೆ ಮಾಡಿದರು ಎಂಬುದು ಗೊತ್ತಿಲ್ಲ. ಸದ್ಯ ನಾನು ಹಾಕಿದ್ದ ಅರ್ಜಿ ವಿಚಾರಣೆಗೆ ಬಂದಿದೆ. ತಮ್ಮ ಪರ ವಾದ ಮಾಡಲು ಒಬ್ಬೊಬ್ಬರಿಗೆ ₹25 ಲಕ್ಷ ಕೊಟ್ಟು ಖ್ಯಾತ-ವಿಖ್ಯಾತ 17 ವಕೀಲರನ್ನು ಡಿಕೆಶಿ ನೇಮಕ ಮಾಡಿದ್ದು, ನಾನು ಕರ್ನಾಟಕದ ಒಬ್ಬ ಒಳ್ಳೆಯ ವಕೀಲರನ್ನು ನೇಮಿಸುವೆ ಎಂದು ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಸುಮಾರು ₹2 ಕೋಟಿಗೂ ಅಧಿಕ ಖರ್ಚು ಮಾಡಿ ಸುಪ್ರೀಂ ಕೋರ್ಟಿನ ವಕೀಲರನ್ನು ನೇಮಕ ಮಾಡಿದ್ದಾರೆ. ಈಗ ಹಣದ ಬಲದ ಗೆಲ್ಲುತ್ತದೆಯೋ ಅಥವಾ ಸತ್ಯಕ್ಕೆ ಜಯವಾಗುತ್ತದೆಯೋ ಎಂದು ಕಾದು ನೋಡೋಣ ಎಂದು ಯತ್ನಾಳ್ ಅವರು ಮಾರ್ಮಿಕವಾಗಿ ಹೇಳಿದ್ದಾರೆ.