ವಿಜಯನಗರ: ರಾಜ್ಯದಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು ಹಲವೆಡೆ ಸಾಕಷ್ಟು ಹಾನಿ ಉಂಟುಮಾಡಿದೆ. ವಿಜಯನಗರ ಜಿಲ್ಲೆಯಲ್ಲೂ ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಕೂಡ್ಲಿಗಿ ತಾಲೂಕಿನ ಜಮ್ಮೋಬನಹಳ್ಳಿಯ ಮ್ಯಾಸರಹಟ್ಟಿಯಲ್ಲಿ ಸಿಡಿಲು ಬಡಿದು 21 ಕುರಿಗಳು ಸಾವನ್ನಪ್ಪಿದ್ದ ಧಾರುಣ ಘಟನೆ ನಡೆದಿದೆ.
ಮ್ಯಾಸರಹಟ್ಟಿ ಗ್ರಾಮದ ಗೊಂಚಿಗಾರ ಗಿಡ್ಡೋಬಯ್ಯ ಎಂಬುವವರಿಗೆ ಸೇರಿದ ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಕುರಿಗಳನ್ನು ಮೇಯಿಸಲು ಅರಣ್ಯದಂಚಿಗೆ ತೆರಳಿದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲು ಆರಂಭವಾಗಿತ್ತು. ಹೀಗಾಗಿ ಮಳೆಯಿಂದ ರಕ್ಷಣೆ ಪಡೆಯಲು ಕುರಿಗಳ ಹಿಂಡನ್ನು ಮರದ ಕೆಳಗೆ ನಿಲ್ಲಿಸಿದ ಸಂದರ್ಭದಲ್ಲೇ ಭಾರೀ ಪ್ರಮಾಣದ ಸಿಡಿಲು ಬಡಿದಿದ್ದು, ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ಏಕಾಏಕಿ 21 ಕುರಿಗಳ ಸಾವು ಕಂಡು ಕುರುಗಾಹಿ ಗಿಡ್ಡೋಬಯ್ಯ ದಿಗ್ಭ್ರಮೆಗೊಂಡಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಹೀಗಾಗಿ ಸಂತ್ರಸ್ತ ಕುರಿಗಾಹಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಮೊರೆಯಿಟ್ಟಿದ್ದಾರೆ.