ನವದೆಹಲಿ: ರೈಲಿನಲ್ಲಿ ಟಿಕೆಟ್ ಬುಕಿಂಗ್ ಮಾಡುವ ನಿಯಮದಲ್ಲಿ ಬದಲಾವಣೆ ಮಾಡಲು ರೈಲ್ವೆ ಇಲಾಖೆ ಮುಂದಾಗಿದ್ದು, ನ.1ರಿಂದ ಹೊಸ ಮಾರ್ಗಸೂಚಿ ಅನ್ವಯವಾಗಲಿದೆ.
ಹೌದು, ಮುಂಗಡ ರೈಲು ಟಿಕೆಟ್ ಕಾಯ್ದಿರಿಸುವಿಕೆಗೆ ಇದ್ದ ಸಮಯದ ಮಿತಿಯನ್ನು ಕಡಿಮೆ ಮಾಡಿರುವುದಾಗಿ ಭಾರತೀಯ ರೈಲ್ವೇ ಇಲಾಖೆ ಘೋಷಿಸಿದೆ. ಈ ಮೊದಲು ಪ್ರಯಾಣದ ದಿನದಿಂದ 120 ದಿನಗಳ ಮೊದಲೇ ಟಿಕೆಟ್ ಕಾಯ್ದಿರಿಸಲು ಇದ್ದ ಅವಕಾಶವನ್ನು, ಇದೀಗ 60 ದಿನಗಳಿಗೆ ಇಳಿಸಲಾಗಿದೆ. ಇದು ರೈಲು ಹೊರಡುವ ದಿನದ ಹೊರತಾಗಿದೆ.
ಈ ನಿಯಮವು ನ.1ರಿಂದ ಜಾರಿಗೆ ಬರಲಿದ್ದು, ಈಗಾಗಲೇ ಟಿಕೆಟ್ ಕಾಯ್ದಿರಿಸಿರುವ ಪ್ರಯಾಣಿಕರಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ 120 ದಿನಗಳ ಮುಂಗಡ ಕಾಯ್ದಿರಿಸುವಿಕೆ ಅವಧಿ(ಎಆರ್ಪಿ)ಯನ್ನು ಇಳಿಕೆ ಮಾಡಿದ್ದರೂ, ಅಕ್ಟೋಬರ್ 31 ರವರೆಗೆ ಮಾಡಿದ ಎಲ್ಲಾ ಬುಕಿಂಗ್ಗಳು ಮಾನ್ಯವಾಗಿರುತ್ತವೆ. ನಿಗದಿತ ದಿನಾಂಕದ ನಂತರ ಎಲ್ಲ ಟಿಕೆಟ್ಗಳನ್ನು ರದ್ದು ಮಾಡಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.
ಅಂತೆಯೇ, ಪ್ರಸ್ತುತ ಕಾಯ್ದಿರಿಸುವಿಕೆಗೆ ಕಡಿಮೆ ಸಮಯ ಮಿತಿ ಹೊಂದಿರುವ ಹಗಲು ಹೊತ್ತು ಸಂಚರಿಸುವ ಎಕ್ಸ್ಪ್ರೆಸ್ ರೈಲುಗಳ ನಿಯಮಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಜೊತೆಗೆ, ಇದು ವಿದೇಶಿ ಪ್ರಯಾಣಿಕರಿಗೆ ಇರುವ 365 ದಿನಗಳ ನಿಯಮಕ್ಕೂ ಅನ್ವಯಿಸುವುದಿಲ್ಲ ಎಂದು ಇಲಾಖೆ ಹೇಳಿದೆ.
ಈ ಬದಲಾವಣೆಯನ್ನು ಪ್ರಯಾಣಿಕರ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡೇ ಮಾಡಲಾಗಿದ್ದು, ಇದರಿಂದಾಗಿ ಟಿಕೆಟ್ ರದ್ದತಿಯ ಸಂಖ್ಯೆಯೂ ಕಡಿಮೆಯಾಗುವ ನಿರೀಕ್ಷೆಯಿದೆ.