ನವದೆಹಲಿ: ನನಗೂ ಹಾಗೂ ನನ್ನ ಸಹೋದರನಿಗೆ ಯಾವುದೇ ಸಂಬಂಧವಿಲ್ಲ. ಇನ್ನೂ ನನಗೆ ಯಾವುದೇ ಸಹೋದರಿ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಮ್ಮ ತಮ್ಮ ಸಹೋದರರ ಮೇಲೆ ದಾಖಲಾದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಟ್ ವಂಚನೆ ವಿಷಯದಲ್ಲಿ ಗುರುವಾರ ನನ್ನ ಸಹೋದರರ ಮೇಲೆ ಎಫ್ಐಆರ್ ಆಗಿದ್ದು, ಕಾಂಗ್ರೆಸ್ ನನ್ನ ವಿರುದ್ಧ ಪ್ರತಿಭಟನೆ ಮಾಡಿದೆ. ಸುದ್ದಿಯಲ್ಲಿ ಇರುವಂತೆ ನನಗೆ ಯಾವುದೇ ಸಹೋದರಿ ಇಲ್ಲ. ನಾವು ಮೂರು ಜನರು ಸಹೋದರರು ಇದ್ದೇವೆ ಎಂದು ಹೇಳಿದ್ದಾರೆ.
ಇನ್ನೂ ಪ್ರಕರಣದಲ್ಲಿ ಕೇಳಿಬಂದ ಸಹೋದರ ಗೋಪಾಲ್ ಜೋಶಿ ಮತ್ತು ನಾನು ಬೇರೆ ಬೇರೆಯಾಗಿ 32 ವರ್ಷ ಆಗಿದೆ. ಈ ಹಿಂದೆಯೂ ಗೋಪಾಲ ಅವರ ಮೇಲೆ ಕೇಸ್ ಆಗಿತ್ತು. ಆಗಲೂ ನನ್ನ ಮೇಲೆ ಆರೋಪ ಮಾಡುವ ಯತ್ನ ನಡೆದಿತ್ತು. ಕಳೆದ 12 ವರ್ಷಗಳ ಹಿಂದೆ ಈ ಕುರಿತು ಕೋಟ್೯ನಿಂದ ತಡೆಯಾಜ್ಞೆ ತಂದಿದೆ. ನಾವಿಬ್ಬರು ಬೇರೆಯಾಗಿ 32 ವರ್ಷ ಆಗಿದ್ದರಿಂದ ನಮಗೂ ಅವರಿಗೂ ಯಾವುದೇ ವ್ಯವಹಾರಗಳು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗೋಪಾಲ್ ವಿರುದ್ಧ ಎಫ್ಐಆರ್ ಯಾಕೆ?:
ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರು. ಪಡೆದು ವಂಚಿಸಿದ ಆರೋಪದಡಿ ಪ್ರಹ್ಲಾದ್ ಜೋಶಿ ಸಹೋದರ ಸೇರಿ ಮೂವರ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಗಠಾಣಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ ಫೂಲ್‌ಸಿಂಗ್ ಚವ್ಹಾಣ್ ಅವರ ಪತ್ನಿ ಸುನಿತಾ ಚವ್ಹಾಣ್ ನೀಡಿದ ದೂರಿನ ಮೇರೆಗೆ ಜೋಶಿ ಅವರ ಸಹೋದರ ಗೋಪಾಲ್ ಜೋಶಿ, ಅವರ ಮಗ ಅಜಯ್, ಗೋಪಾಲ್‌ರ ತಂಗಿ ವಿಜಯಲಕ್ಷ್ಮಿ ವಿರುದ್ಧ ವಂಚನೆ, ಜಾತಿ ನಿಂದನೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ತಮಗೆ ಪರಿಚಯವಿದ್ದ ಶೇಖರ್‌ನಾಯಕ್ ಮುಖಾಂತರ ಗೋಪಾಲ್ ಪರಿಚಯವಾಗಿದ್ದರು. ನನ್ನ ತಮ್ಮ ಪ್ರಹ್ಲಾದ್ ಹೇಳಿದಂತೆ ಮೋದಿ ಮತ್ತು ಶಾ ಕೇಳುತ್ತಾರೆ. ನಿಮ್ಮ ಪತಿಗೆ ಲೋಕಸಭಾ ಟಿಕೆಟ್ ಕೊಡಿಸುತ್ತೇನೆ ಎಂದು ಭರವಸೆ ನೀಡಿ ಹಣ ಪಡೆದಿದ್ದರು ಎಂದು ದೂರಲಾಗಿದೆ.