ಮಂಡ್ಯ: ಮಂಡ್ಯದಲ್ಲಿ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಇದೀಗ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸಕ್ಕರೆನಾಡು ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಬೇಕು ಎಂದು ಪ್ರಗತಿಪರರು ಧ್ವನಿ ಎತ್ತಿದ್ದರು.
ಆದರೆ ಪ್ರತಿವರ್ಷದಂತೆ ಈ ಬಾರಿ ಕೂಡ ಸಸ್ಯಾಹಾರ ನೀಡಲಾಗುತ್ತಿತ್ತು. ಆದರೆ ಕೊನೆಯ ದಿನವಾದ ಭಾನುವಾರ ಸಮ್ಮೇಳನದಲ್ಲಿ ಬಾಡೂಟ ಹಂಚಿಕೆ ಮಾಡಲಾಗಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಂಚಿಕೆಗಾಗಿ ಜಟಾಪಟಿ ಉಂಟಾಗಿದ್ದು, ಪ್ರಗತಿಪರರು ಮೊಟ್ಟೆ, ಚಿಕನ್, ಕಬಾಬ್, ಕೋಳಿ ಸಾಂಬಾರ್, ರಾಗಿ ಮುದ್ದೆ ಹಂಚಿಕೆ ಮಾಡಿದ್ದಾರೆ.
ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದು, ಈ ಮಧ್ಯೆ ಪೊಲೀಸರು ಮತ್ತು ಪ್ರಗತಿಪರರ ನಡುವೆ ವಾಗ್ವಾದ ಉಂಟಾಗಿದೆ. ಮಾಂಸಾಹಾರ ವಿತರಣೆ ವೇಳೆ ನೂಕು ನುಗ್ಗಲು ಉಂಟಾಗಿ ಗಲಾಟೆ ನಡೆದಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸ್ ಸಿಬ್ಬಂದಿ ಕೊನೆಗೂ ಮಾಂಸಾಹಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಪ್ರಗತಿಪರರು ಮಾಂಸಾಹಾರ ವಿತರಣೆಗೆ ಪಟ್ಟು ಹಿಡಿದ್ದರು. ಈ ವಾದ-ವಿವಾದಗಳ ನಡುವೆಯೇ ಪ್ರಗತಿಪರರು ಸಮ್ಮೇಳದ ಊಟದ ಕೌಂಟರ್‌ನಲ್ಲೇ ಮಾಂಸಾಹಾರ ವಿತರಣೆ ಮಾಡಿದ್ದಾರೆ. ಈ ವೇಳೆ ಮಾಂಸಾಹಾರಕ್ಕಾಗಿ ಸಮ್ಮೇಳನಕ್ಕೆ ಆಗಮಿಸಿದ್ದ ಜನರು ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಯಿತು. ಈ ವೇಳೆ ಸಾರ್ವಜನಿಕರಿಂದ ಪೊಲೀಸರು ಮಾಂಸದೂಟವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಡೂಟ ಹಂಚಿದ ವಿಚಾರಕ್ಕೆ ಸಾಹಿತ್ಯಾಸಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಬಾಡೂಟಕ್ಕಾಗಿ ಹೋರಾಟ ಮಾಡುವ ಸ್ಥಳವಲ್ಲ. ಇಲ್ಲಿ ಸಾಹಿತ್ಯ, ಭಾಷೆ ಬಗ್ಗೆ ಚರ್ಚೆ ಮಾಡಬೇಕು. ಮಂಡ್ಯ ಬಾಡೂಟ ಫೇಮಸ್ ಅಂತ ಈ ಸ್ಥಳದಲ್ಲಿ ಬಾಡೂಟ ಹಂಚಿದ್ದು ಸರಿಯಲ್ಲ. ಸಸ್ಯಹಾರ ಊಟ ಮಾಡಲು ಸಾಕಷ್ಟು ಜನರು ಬರುತ್ತಿದ್ದಾರೆ. ಮಾಂಸದೂಟ ಮಾಡಿಸಿದ್ದರೆ ಅದನ್ನ ನಿರ್ವಹಣೆ ಮಾಡುವುದು ಕಷ್ಟವಾಗುತಿತ್ತು ಎಂದಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಮುದ್ದೆ, ಸೊಪ್ಪಿನ ಸಾಂಬಾರ್, ಅನ್ನ-ರಸಂ, ಮಜ್ಜಿಗೆ, ಸಂಡಿಗೆ ಹಾಗೂ ಬಾದುಷಾವನ್ನು ಬಾಣಸಿಗರು ಸಿದ್ದಪಡಿಸಿದ್ದರು. ಸಮ್ಮೇಳನದಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಆಗಮಿಸಿದ್ದರು.