ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ನ.20ರಂದು ರಾಜ್ಯವ್ಯಾಪಿ ಮದ್ಯದಂಗಡಿ ಬಂದ್ ಮಾಡಲು ರಾಜ್ಯ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ನಿರ್ಧರಿಸಿದೆ.
ವರ್ಗಾವಣೆ, ಪ್ರಮೋಷನ್‌ಗೆ ಲಕ್ಷಾಂತರ ರು. ಲಂಚ ಕೊಡಬೇಕು ಎಂದು ಹೇಳಿ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಸನ್ನದುದಾರರಿಂದ ಮನಸೋ ಇಚ್ಛೆ ಲಂಚ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಇತ್ತೀಚೆಗೆ ಮದ್ಯ ಮಾರಾಟಗಾರರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಕೈಗೊಂಡ ನಿರ್ಣಯದಂತೆ ನ.20 ರಂದು ಮದ್ಯ ಮಾರಾಟ ಬಂದ್ ಮಾಡಲು ನಿರ್ಧರಿಸಲಾಗಿದೆ.
Read This: ಅ.27ರಂದು ನಡೆದ ಗ್ರಾಮ ಆಡಳಿತಾಧಿಕಾರಿ ಹುದ್ದೆ ಪರೀಕ್ಷೆಗೆ 80% ಅಭ್ಯರ್ಥಿಗಳು ಹಾಜರು
ಅಬಕಾರಿ ಅಧಿಕಾರಿಗಳು ಲಂಚಕ್ಕಾಗಿ ಹಪಹಪಿಸುತ್ತಿರುವುದರಿಂದ ರಾಜ್ಯದಲ್ಲಿ ನಕಲಿ, ಅಂತಾರಾಜ್ಯ ಮದ್ಯ ಮಾರಾಟ ಹೆಚ್ಚಳವಾಗಿ ಅಬಕಾರಿ ಆದಾಯ ಕುಂಠಿತಗೊಂಡಿದೆ. ಅಬಕಾರಿ ಇಲಾಖೆ ಅನುದಾನ ಇಲ್ಲದೇ ಇರುವ ಇಲಾಖೆ ಆಗಿರುವುದರಿಂದ ಆರ್ಥಿಕ ಇಲಾಖೆಯ ಜವಾಬ್ದಾರಿ ಹೊಂದಿರುವ ಸಚಿವರಿಗೆ ಇದನ್ನು ವಹಿಸಬೇಕು ಎಂದು ಸಂಘ ಆಗ್ರಹಿಸಿ ಮದ್ಯ ಮಾರಾಟ ಬಂದ್‌ಗೆ ಕರೆ ನೀಡಿದೆ.