ಹರಿಹರ: ಜ್ಯೋತಿಷಿಗಳು ಹೇಳುವಂತೆ ತೊಟ್ಟಬಟ್ಟೆ ಹಾಗೂ ಪೂಜಾ ವಸ್ತುಗಳನ್ನು ನದಿಗಳಲ್ಲಿ ಹಾಕಿ, ಪಾಪಬಿಟ್ಟು ಹೋಗುತ್ತದೆ ಎಂಬ ಮಾತನ್ನು ನಂಬಬೇಡಿ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನುಡಿದರು.
ನಗರದಲ್ಲಿ ಶುಕ್ರವಾರ ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಆಶ್ರಯದಲ್ಲಿ ಶೃಂಗೇರಿಯಿಂದ ಕಿಷ್ಕಿಂದೆವರೆಗಿನ ನಿರ್ಮಲ ತುಂಗಭದ್ರಾ ಅಭಿಯಾನ ಅಂಗವಾಗಿ ನಡೆದ ಪಾದಯಾತ್ರೆ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನರು ನಿತ್ಯ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಜ್ಯೋತಿಷಿಗಳ ಮಾತನ್ನು ನಂಬಿ, ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಬಟ್ಟೆ, ಇನ್ನಿತರೆ ತ್ಯಾಜ್ಯಗಳನ್ನು ಬಿಟ್ಟುಹೋಗುತ್ತಿದ್ದಾರೆ. ಇದರಿಂದ ನದಿಮೂಲ ಮಲೀನಗೊಳ್ಳುತ್ತಿದೆ. ನಿಮ್ಮ ಮುಂದಿನ ತಲೆಮಾರಿಗೆ ಕುಡಿಯಲು ಶುದ್ಧ ನೀರು ಸಿಗದಂತಹ ಪರಿಸ್ಥಿತಿ ಉದ್ಭವ ಅಗಲಿದೆ ಎಂದು ತಿಳಿಸಿದರು.
ಪಂಚಮಹಾ ಭೂತಗಳಾದ ಭೂಮಿ, ಆಕಾಶ, ನೀರು, ಗಾಳಿ, ಅಗ್ನಿ ಇವು ಎಲ್ಲ ಜಾತಿ, ಜನಾಂಗಕ್ಕೂ, ಜಲಚರ, ವನಚರ ಜೀವಿಗಳಿಗೂ ಅತ್ಯವಶ್ಯವಾಗಿವೆ. ಇವುಗಳ ಸಂರಕ್ಷಣೆಗೆ ಸರ್ವರೂ ಜಾಗೃತರಾಗಿರಬೇಕು. ಯಾವುದೇ ಪ್ರಯತ್ನ ಮಾಡಿಯಾದರೂ ಜಲಮೂಲವಾದ ನದಿಯ ಪಾವಿತ್ರ್ಯ ರಕ್ಷಿಸಿ, ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.