ಬೆಂಗಳೂರು: ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ನಿರ್ವಹಣೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ “ಇಲಾಖೆಯ ಅಧಿಕಾರಿ/ಸಿಬ್ಬಂದಿಯ ನಡೆ ವಿದ್ಯಾರ್ಥಿನಿಲಯದ ಕಡೆ” ಎಂಬ ಕಾರ್ಯಕ್ರಮವು ಪ್ರತಿ ತಿಂಗಳ 3ನೇ ಶನಿವಾರದಂದು ರಾಜ್ಯಾದ್ಯಂತ ಆರಂಭಗೊಂಡಿದೆ.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 1277 ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳು 993 ಬಾಲಕ ಮತ್ತು 284 ಬಾಲಕಿಯರು) ಮತ್ತು 1320 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು (605 ಬಾಲಕ ಮತ್ತು 715 ಬಾಲಕಿಯರು) ಕಾರ್ಯನಿರ್ವಹಿಸುತ್ತಿದ್ದು ಸದರಿ ವಿದ್ಯಾರ್ಥಿನಿಲಯಗಳಲ್ಲಿ ಕ್ರಮವಾಗಿ 68803 ಮತ್ತು 175033 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ಕಲ್ಪಿಸಲಾಗಿರುತ್ತದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತಾಲಯದ ಎಲ್ಲಾ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು, ಪತ್ರಾಂಕಿತ ವ್ಯವಸ್ಥಾಪಕರು, ಕಛೇರಿ ಮೇಲ್ವಿಚಾರಕರು, ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರು ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಕಛೇರಿ ಮೇಲ್ವಿಚಾರಕರು, ತಾಲ್ಲೂಕು ವಿಸ್ತರಣಾಧಿಕಾರಿಗಳು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ, ವಿದ್ಯಾರ್ಥಿನಿಲಯದ ನಿರ್ವಹಣೆ ಕುರಿತು ಪರಿಶೀಲಿಸಿ ವಿದ್ಯಾರ್ಥಿನಿಲಯದ ತಪಾಸಣಾ ವರದಿಯನ್ನು ಭರ್ತಿ ಮಾಡಿ ಆಯುಕ್ತಾಲಯಕ್ಕೆ ವರದಿಯನ್ನು ಸಲ್ಲಿಸುವ ಜವಾಬ್ದಾರಿ ವಹಿಸಲಾಗಿದೆ.
ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ವಿದ್ಯಾರ್ಥಿ ನಿಯಲದಲ್ಲಿ ಕಂಪೌಂಡ್/ಫೆನ್ಸಿಂಗ್ ಇದೆಯೇ, ಆವರಣದಲ್ಲಿ ಕೈತೋಟ, ಗಿಡಗಳನ್ನು ಬೆಳೆಸುತ್ತಿರುವ ಬಗ್ಗೆ, ಕಂಪೋಸ್ಟ್ ಗುಂಡಿ ಇರುವ ಬಗ್ಗೆ, ಕಟ್ಟಡದ ಸುತ್ತಲಿನ ವಾತಾವರಣ ಮಕ್ಕಳ ಸುರಕ್ಷತೆಗೆ ಪೂರಕವಾಗಿರವ ಬಗ್ಗೆ, ಕಟ್ಟಡಕ್ಕೆ ತಾಗಿಕೊಂಡು ನೀರಿನ ಗುಂಡಿ, ಕೊಳಚೆ ನೀರಿನ ಕಾಲುವೆ, ಕಟ್ಟಡದ ಮೇಲೆ ಹೈಟೆನ್ಷನ್ ವಿದ್ಯುತ್ ಲೈನ್ನ ಅಪಾಯ ಇಲ್ಲದಿರುವ ಬಗ್ಗೆ, ನೀರಿನ ವ್ಯವಸ್ಥೆ ಸಮರ್ಪಕವಾಗಿ ಇರುವ ಬಗ್ಗೆ, ನಿಯಮಿತವಾಗಿ ನೀರಿನ ಸಂಪು, ಟ್ಯಾಂಕ್ ಸ್ವಚ್ಛಗೊಳಿಸಿರುವ ಬಗ್ಗೆ, ಸೊಳ್ಳೆಗಳು ಬಾರದಂತೆ ಕ್ರಮವಹಿಸುವ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಬೇಕಿದೆ.
ಶೌಚಾಲಯ ಮತ್ತು ಸ್ನಾನ ಗೃಹಗಳಲ್ಲಿ ಸ್ವಚ್ಛತೆ ಇರುವ ಬಗ್ಗೆ, ಉತ್ತಮ ಗುಣಮಟ್ಟದ ಹಾಸಿಗೆ, ದಿಂಬು ಹೊದಿಕೆ ನೀಡಿರುವ ಬಗ್ಗೆ, ಕಿಟಕಿಗಳಿಗೆ ಮೆಸ್ ಹಾಕಿರುವ ಬಗ್ಗೆ, ಕೊಠಡಿಯಲ್ಲಿ ಸಾಕಷ್ಟು ಗಾಳಿ ಬೆಳಕು ಇರುವ ಬಗ್ಗೆ ಮತ್ತು ಯುಪಿಎಸ್ ವ್ಯವಸ್ಥೆ ಇದ್ದು, ಕಟ್ಟಡದ ಸ್ಥಿತಿಗತಿ ಮತ್ತು ಪೈಟಿಂಗ್ ಬಗ್ಗೆ ಪರಿಶೀಲಿಸಬೇಕಿದೆ.
ವಿದ್ಯಾರ್ಥಿನಿಲಯದ ಗ್ರಂಥಾಲಯಲ್ಲಿ ಅಗತ್ಯ ಪುಸ್ತಕಗಳು, ದಿನಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ನಿಯತಕಾಲಿಕೆಗಳು, ವ್ಯಕ್ತಿತ್ವ ವಿಕಸನ ತರಗತಿಗಳನ್ನು ನಡೆಸುತ್ತಿರುವ ಬಗ್ಗೆ, ಸಿಸಿಟಿವಿ ಅಳವಡಿಕೆ, ಶುಚಿ ಸಂಭ್ರಮ ಕಿಟ್ ಪೂರೈಕೆ, ನಿಯಮಿತ ಆರೋಗ್ಯ ತಪಾಸಣೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ ಮತ್ತಿತರ ವಿಷಯಗಳು ಸೇರಿದಂತೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗುವಂತಹ ಎಲ್ಲಾ ಸೌಲಭ್ಯಗಳು ಇರುವ ಬಗ್ಗೆ ಪರಿಶೀಲಿಸಿ, ಕುಂದು ಕೊರತೆಗಳಿದ್ದಲ್ಲಿ ಅವುಗಳನ್ನೂ ಕೂಡಾ ತಪಾಸಣಾ ವರದಿಯಲ್ಲಿ ನಮೂದಿಸುವಂತೆ ಸೂಚನೆ ನೀಡಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ರಾಜ್ಯಮಟ್ಟದಿಂದ ತಾಲೂಕು ಮಟ್ಟದವರೆಗಿನ ಎಲ್ಲಾ ಅಧಿಕಾರಿಗಳು ಸಿಬ್ಬಂದಿ “ಇಲಾಖೆಯ ಅಧಿಕಾರಿ/ಸಿಬ್ಬಂದಿಯ ನಡೆ ವಿದ್ಯಾರ್ಥಿನಿಲಯದ ಕಡೆ” ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಿ ವರದಿ ನೀಡಬೇಕಿರುವ ಮೂಲಕ ರಾಜ್ಯದ ಹಲವು ಹಾಸ್ಟೆಲ್ಗಳಲ್ಲಿ ಕಂಡುಬರುವ ಮೂಲಭೂತ ಸೌಲಭ್ಯಗಳ ಸಮಗ್ರ ವರದಿ ಸಿದ್ದಪಡಿಸಿ, ಹಾಸ್ಟೆಲ್ಗಳಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹಾಸ್ಟೆಲ್ ವಿದ್ಯಾರ್ಥಿಗಳ ದೈಹಿಕ ಮತ್ತು ಶೈಕ್ಷಣಿಕ ಸೇರಿದಂತೆ ಅವರ ಸರ್ವತೋಮುಖ ಬೆಳವಣಿಗೆಗೆ ಈ ಕಾರ್ಯಕ್ರಮ ಆಶಾಕಿರಣವಾಗಿ ಮೂಡಿಬರುವ ಗುರಿ ಹೊಂದಿದೆ.