ನವದೆಹಲಿ: ನವದೆಹಲಿಯ ರೈಲ್ ಭವನದಲ್ಲಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಕರಾವಳಿ ಹಾಗೂ ಚಿಕ್ಕಮಗಳೂರು ರೈಲ್ವೇ ಸೇವೆಗಳ ಕುರಿತು ಬಹುಮುಖ್ಯ ಕ್ರಮಗಳ ಬಗ್ಗೆ ಕರ್ನಾಟಕದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮಂಗಳೂರು ಸಂಸದ ಕಾಪ್ಟನ್ ಚೌಟ, ಬೆಂಗಳೂರು ಗ್ರಾಮಾಂತರ ಸಂಸದ ಡಾಕ್ಟರ್ ಮಂಜುನಾಥ್ ಭೇಟಿಯಾಗಿ ವಿಸ್ತಾರವಾಗಿ ಚರ್ಚಿಸಿದರು.
ಕೊಂಕಣ ರೈಲ್ವೇ ವಿಲೀನದ ಕುರಿತು ಸಚಿವರಿಗೆ ಅರಿವಿದ್ದು, ಮುಂದಿನ ಹಂತದ ಬಗ್ಗೆ ಅವರ ಜೊತೆ ಮಾತಾಡುತ್ತಾ, ಪಾಲುದಾರಿಕಾ ರಾಜ್ಯ ಸರಕಾರಗಳಾದ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ ಸರಕಾರಗಳ ಶೇರು ಮರು ಖರೀದಿಗೆ ಕಾರ್ಯಪ್ರವ್ರತ್ತರಾಗಲು ಮನವಿ ಮಾಡಲಾಗಿದ್ದು ಸಚಿವರು ಈ ಕುರಿತು ಮಹತ್ವದ ಸೂಚನೆಯನ್ನು ಅಧಿಕಾರಿಗಳಿಗೆ ರವಾನಿಸಿದರು.
ಕರಾವಳಿಯ ಕಾರವಾರ, ಕುಂದಾಪುರ, ಉಡುಪಿ, ಮಂಗಳೂರು ನಡುವೆ ಜನರ ಬಯಕೆಯಂತೆ ರೈಲು ಓಡಿಸಲು ತೀವ್ರ ಅಡ್ಡಿ ಉಂಟು ಮಾಡಿರುವ ಸಕಲೇಶಪುರ ಘಾಟ್ ಸಮಸ್ಯೆಗೆ ಈಗಾಗಲೇ ಪರಿಣಿತರಿಂದ ತಿಳಿಸಲ್ಪಟ್ಟ ಪರಿಹಾರವನ್ನು ಸಚಿವರ ಸಮ್ಮುಖದಲ್ಲಿ ಇಡಲಾಗಿದ್ದು, ಅದರಂತೆ ಸಕಲೇಶಪುರ ಸುಬ್ರಮಣ್ಯ ನಡುವೆ ಹಳಿ ದ್ವಿಗುಣ, ಸುಬ್ರಮಣ್ಯ ಪಡೀಲ್ ಮಾರ್ಗದ ವೇಗ ಹೆಚ್ಚಳ ಹಾಗೂ ಘಾಟ್ ಭಾಗದ ಹರೇ ಬೆಟ್ಟ ನಿಲ್ದಾಣವನ್ನು ಕ್ರಾಸಿಂಗ್ ನಿಲ್ದಾಣವಾಗಿ ಬಳಸುವ ಕುರಿತು ವಿಸ್ತಾರವಾಗಿ ಚರ್ಚಿಸಿ, ಮಾಡಬೇಕಾದ ಸಿದ್ದತೆಗಳಿಗೆ ಸಚಿವರ ಮೂಲಕ ಚಾಲನೆ ನೀಡಲಾಗಿದೆ.
ಘಾಟ್ ಮದ್ಯ ಭಾಗದ ಹರೇ ಬೆಟ್ಟ ಕ್ರಾಸಿಂಗ್ ನಿಲ್ದಾಣವಾಗಿ ಅರಂಭವಾದರೆ, ಬೆಂಗಳೂರು, ಮಂಗಳೂರು, ಕುಂದಾಪುರ, ಕಾರವಾರ ನಡುವೆ ಹೊಸ ರೈಲು ಹಾಗೂ ಹೆಚ್ಚು ಬೋಗಿ ಅಳವಡಿಸಿ ಉತ್ತಮ ಸಮಯ ಪಟ್ಟಿ ರಚಿಸಲು ಸಾಧ್ಯವಾಗಲಿದೆ.
ಕಾರವಾರ, ಕುಂದಾಪುರ, ಬೆಂಗಳೂರು ನಡುವೆ ಪಂಚಗಂಗಾ ಮಾದರಿಯಲ್ಲಿಯೇ, ಆದರೆ ತಡವಾಗಿ ಬೆಂಗಳೂರಿನಿಂದ ಹೊರಡುವ ಹೊಸ ಪಡೀಲ್ ಬೈಪಾಸ್ ನೇರ ರೈಲಿಗೆ ಸಚಿವರಿಗೆ ಮನವಿ ಮಾಡಲಾಗಿದ್ದು,ಇದರ ಜತೆ ಚಿಕ್ಕಮಗಳೂರು, ತಿರುಪತಿ, ಬೆಂಗಳೂರು ಮಾರ್ಗದ ಮೂಲಕ ಆರಂಭಿಸುವಂತೆಯೂ ಮನವಿ ಮಾಡಲಾಗಿದೆ.
ಬೆಂಗಳೂರು ಮುರುಡೇಶ್ವರ ರೈಲಿನ ಗೋವಾದ ವಾಸ್ಕೋಗೆ ವಿಸ್ತರಣೆ ಮತ್ತು ಅದರಿಂದ ಕರಾವಳಿಗೆ ಸಿಗುವ ಗೋವಾ ವಿಮಾನ ನಿಲ್ದಾಣ ಹಾಗೂ ವೇಲಾಂಕಣಿ, ತಿರುಪತಿ, ಉತ್ತರ ಕರ್ನಾಟಕ ಸಂಪರ್ಕದ ಬಗ್ಗೆ ಕರಾವಳಿ ಸಂಸದರು ಮನವರಿಕೆ ಮಾಡಿಕೊಟ್ಟರು.
ರೈಲು ಸಂಖ್ಯೆ 16585 SMVB ಮುಡೇಶ್ವರ ಎಕ್ಸ್ ಪ್ರೆಸ್ ಅನ್ನು ವಾಸ್ಕೋವರೆಗೆ ವಿಸ್ತರಿಸಲು ಹಾಗೂ ರೈಲು ಸಂಖ್ಯೆ 17317/18 ಎಕ್ಸ್ ಪ್ರೆಸ್ ಅನ್ನು ಕಾರವಾರದವರೆಗೆ ವಿಸ್ತರಿಸಲು ಮತ್ತು ರೈಲು ಸಂಖ್ಯೆ 17317/18 ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಈ ಸಂದರ್ಭದಲ್ಲಿ ಹುಬ್ಬಳ್ಳಿ-ಅಂಕೋಲಾ ಹಾಗೂ ತಾಳಗುಪ್ಪ- ಹುಬ್ಬಳ್ಳಿ ರೈಲ್ವೆ ಮಾರ್ಗಗಳ ಕುರಿತು ಚರ್ಚಿಸಲಾಯಿತು. ಇದಕ್ಕೆ ರೈಲ್ವೆ ಸಚಿವರು ಉತ್ತಮ ಸ್ಪಂದನೆ ನೀಡಿ ಆಶ್ವಾಸನೆ ಕೊಟ್ಟಿದ್ದಾರೆ.