ದಾವಣಗೆರೆ: ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಸಾವಿಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರೇ ಕಾರಣ ಅಂತಾ ನಾವೂ ಹೇಳಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಗ್ಗೆ ಹಗುರ ಹೇಳಿಕೆಗಳ ನೀಡುತ್ತಿರುವ ಬೈರತಿ ಸುರೇಶ್ ಹೊಸದಾಗಿ ಮಂತ್ರಿ ಆಗಿದ್ದಾರೆ. ಒಳ್ಳೆಯ ಇಲಾಖೆ ಸಚಿವರಾಗಿ ಒಳ್ಳೆಯ ಕೆಲಸ ಮಾಡಲಿ. ಸ್ವರ್ಗದಲ್ಲಿರುವ ದಿವಂಗತ ಮೈತ್ರಾದೇವಿ ಅವರ ಬಗ್ಗೆ ಚರ್ಚೆ ಮಾಡುವಷ್ಟು ದೊಡ್ಡವರಾ ನೀವು? ಒಬ್ಬ ಮಹಿಳೆಯ ಬಗ್ಗೆ ಬೈರತಿ ಸುರೇಶ ಹಗುರವಾಗಿ ಮಾತನಾಡುವುದು ಸರಿಯಲ್ಲ. ನೀವು ಹೀಗೆ ಮಾತನಾಡುತ್ತಿದ್ದರೆ ರಾಕೇಶ ಸಿದ್ದರಾಮಯ್ಯ ಸಾವಿಗೆ ನೀವೇ ಕಾರಣ ಅಂತಾ ನಾವೂ ಹೇಳುತ್ತೇವೆ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ವಾಸ್ತವಾಂಶವನ್ನೇ ಹೇಳಿದ್ದಾರೆ. ಮಹಿಳೆಯರ ಬಗ್ಗೆ ಹೀಗೆ ಅಗೌರವವಾಗಿ ಮಾತನಾಡಿದರೆ ರಾಜ್ಯದ ಜನತೆ ಬೈರತಿ ಸುರೇಶಗೆ ತಕ್ಕ ಪಾಠ ಕಲಿಸುತ್ತಾರೆ. ಇದೇ ಧೋರಣೆಯಲ್ಲಿ ಮಾತನಾಡುತ್ತಿದ್ದರೆ ಬೈರತಿ ಸುರೇಶ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬೈರತಿ ಮೇಲೆ ಶೀಘ್ರ ದಾಳಿ:
ಸಿಎಂ ಹಿಂದೆ, ಮುಂದೆ ಸುತ್ತುವುದನ್ನು ಬಿಟ್ಟು, ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಬೇಕು. ಹೆಣ್ಣು ಮಕ್ಕಳ ಬಗ್ಗೆ ಹಗುರ ಮಾತನಾಡುವುದನ್ನು ಬಿಡಬೇಕು. ಸಚಿವ ಬೈರತಿ ಸುರೇಶ ಮೈಸೂರಿಗೆ ವಿಶೇಷ ವಿಮಾನದಲ್ಲಿ ಹೋಗಿ, ಕಡತಗಳನ್ನು ತಂದು ಸುಟ್ಟು ಹಾಕಿದ್ದು ನಿಜ. ಇಂದಲ್ಲ, ನಾಳೆ ಬೈರತಿ ಸುರೇಶ ಮನೆಯ ಮೇಲೆಯೂ ತನಿಖಾ ಸಂಸ್ಥೆಗಳ ದಾಳಿ ನಡೆಯುತ್ತದೆ ಎಂದು ರೇಣುಕಾಚಾರ್ಯ ಸೂಚ್ಯವಾಗಿ ಹೇಳಿದರು.