ಶಿಗ್ಗಾವಿ: ಮಾಜಿ ಸಿಎಂ ಒಬ್ಬರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬೇಕಂತೆ! ಹೀಗೆಂದು ಸಿಎಂಗೇ ನೇರವಾಗಿ ಪತ್ರ ಬರೆದಿದ್ದಾರೆ.
ಹೌದು, ಮಾಜಿ ಸಿಎಂ, ಹಾಲಿ ಸಂಸದರೂ ಆಗಿರುವ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಶಿಗ್ಗಾಂವಿ ಕ್ಷೇತ್ರಕ್ಕೆ ಬಾಕಿ ಇರುವ ಅನುದಾನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ( Siddaramaiah) ಅವರಿಗೆ ಖುದ್ದು ಪತ್ರ ಬರೆದಿದ್ದಾರೆ.
ಶಿಗ್ಗಾಂವಿ – ಸವಣೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ 300 ಕೋಟಿ ರೂ. ಮಂಜೂರು ಮಾಡಿದ್ದು, ಇನ್ನೂ ಸಾಕಷ್ಟು ಅನುದಾನ ಬಿಡುಗಡೆ ಬಾಕಿ ಉಳಿದಿದೆ. ತ್ವರಿತವಾಗಿ ಇದನ್ನು ಬಿಡುಗಡೆ ಮಾಡಿ ಎಂದು ಸಿಎಂಗೆ ಪತ್ರ ಬರೆದು ಬೇಡಿಕೆ ಇಟ್ಟಿದ್ದಾರೆ ಬಸವರಾಜ ಬೊಮ್ಮಾಯಿ.
ಬಸವರಾಜ ಬೊಮ್ಮಾಯಿ ಬರೆದ ಪತ್ರದ ಒಕ್ಕಣಿಕೆ ಹೀಗಿದೆ
ಈಗ ತಾನೇ ನಡೆದ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಜಯಶಾಲಿಯಾಗಿದ್ದು, ತಮಗೂ ಹಾಗೂ ತಮ್ಮ ಪಕ್ಷಕ್ಕೆ ಅಭಿನಂದನೆಗಳು.
ಬಿಜೆಪಿ ಸರ್ಕಾರವಿದ್ದಾಗ ಹಲವಾರು ಯೋಜನೆ ಹಾಗೂ ಕಾಮಗಾರಿಗಳಿಗೆ ಸುಮಾರುಬೀ300 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಅನುದಾನ ಕೊರತೆಯಿಂದ ಅದರಲ್ಲಿ ಕೆಲವು ಸ್ಥಗಿತಗೊಂಡಿವೆ. ಹಾಗಾಗಿ ತಕ್ಷಣ ಅನುದಾನ ಬಿಡುಗಡೆ ನೀಡಿ ಕಾಮಗಾರಿಗಳಿಗೆ ವೇಗ ನೀಡಿ ಎಂದು ಒತ್ತಾಯಿಸಿದ್ದಾರೆ.
ಕೆಲ ಕಾಮಗಾರಿ ರದ್ದು
ಕೆಲ ಕಾಮಗಾರಿಗಳು ಸ್ಥಗುರಗೊಂಡಿದ್ದರೆ ಮತ್ತೆ ಕೆಲವು ಕಾಮಗಾರಿಗಳನ್ನು ರದ್ದು ಮಾಡಲಾಗಿದೆ. ಹೀಗೇಕೆ? ಎಂದು ಸಿಎಂ ಗಮನ ಸೆಳೆದಿದ್ದಾರೆ ಮಾಜಿ ಸಿಎಂ.
ಯಾವುವು ಸ್ಥಗಿತಗೊಂಡಿವೆ
ಅಗತ್ಯ ಕಾಮಗಾರಿಗಳನ್ನು ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ನೀರಾವರಿ, ಮುಜರಾಯಿ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳ ಮತ್ತು ನಿಗಮಗಳಿಂದ ಕೈಗೊಳ್ಳಲಾಗಿತ್ತು. ಈ ಇಲಾಖೆಗಳಿಂದ ಕೈಗೊಂಡಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ.
- ಶಿಗ್ಗಾವಿಯ 250 ಹಾಸಿಗೆ ಸಾರ್ವಜನಿಕ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 96.50 ಕೋಟಿ ರೂ. ಮಂಜೂರಾಗಿದ್ದು, 27.34 ಕೋಟಿ ರೂ. ಬಾಕಿ ಉಳಿದಿದೆ.
- ಶಿಗ್ಗಾವಿಯ ವಿವಿಐಪಿ ಅತಿಥಿ ಗೃಹ ನಿರ್ಮಾಣಕ್ಕೆ 5.30 ಕೋಟಿ ರೂ. ಮಂಜೂರಾಗಿದ್ದು, 78.00 ಲಕ್ಷ ರೂ. ಬಾಕಿ ಉಳಿದಿದೆ.
- ಸರಕಾರಿ ಉಪಕರಣಗಳ ತರಬೇತಿ ಕೇಂದ್ರದ ಕಟ್ಟಡ (ಜೆ.ಟಿ.ಟಿ.ಸಿ) ನಿರ್ಮಾಣಕ್ಕೆ 73.75 ಕೋಟಿ ರೂ. ಮಂಜೂರಾಗಿದ್ದು, 50.00 ಕೋಟಿ ರೂ (ನಬಾರ್ಡ) ಬಾಕಿ ಉಳಿದಿದೆ.
- ಶೀತಲ ಗೃಹ ನಿರ್ಮಾಣಕ್ಕೆ 9.83 ಕೋಟಿ ಮಂಜೂರಾಗಿದ್ದು 6.00 ಕೋಟಿ ರೂ. ಬಾಕಿ ಉಳಿದಿದೆ.
- ಶಿಗ್ಗಾವಿಯಲ್ಲಿ ಟೆಕ್ಸಟೈಲ್ ಪಾರ್ಕ ನಿರ್ಮಾಣಕ್ಕೆ 31.25 ಕೋಟಿ ರೂ. ಮಂಜೂರಾಗಿದ್ದು, 5.50 ಕೋಟಿ ರೂ. ಬಾಕಿ ಉಳಿದಿದೆ.
- ಸವಣೂರು ಆಯುರ್ವೇದಿಕ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 44.00 ಕೋಟಿ ರೂ. ಮಂಜೂರಾಗಿದ್ದು, 18.59 ಬಾಕಿ ಉಳಿದಿದೆ.
ಅನುಭವ ಇರುವ ತಮಗೆ ಹೆಚ್ಚು ಹೇಳಬೇಕಿಲ್ಲ
2ನೇ ಭಾರಿ ಮುಖ್ಯಮಂತ್ರಿ ಆಗಿ ರಾಜ್ಯಭಾರ ಮಾಡುತ್ತಿರುವ ತಮಗೆ ಅನುಭವ ಹೆಚ್ಚಿದೆ. ಹಾಗಾಗಿ ಕಾಲ ಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ತಮಗೆ ಹೆಚ್ಚು ಹೇಳಬೇಕಾಗಿಲ್ಲ ಎಂದು ಪತ್ರದ ಮುಖೇನ ಚಾಟಿ ಬೀಸಿದ್ದಾರೆ ಮಾಜಿ ಸಿಎಂ.