ಲಖನೌ (ಉತ್ತರ ಪ್ರದೇಶ): ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹೈತ್ಯೆಗೈದ ಪ್ರಮುಖ ಆರೋಪಿ ಬಂಧಿತ ಶಿವಕುಮಾರ್ ಗೌತಮ್(22) ತನ್ನ ಪರಿವಾರಕ್ಕೆ ಆರ್ಥಿಕ ನೆರವು ನೀಡುವ ಸಲುವಾಗಿ ಕೃತ್ಯ ಎಸಗಿರುವುದಾಗಿ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ.
ಗುಜರಿ ವ್ಯಾಪಾರಿಯಾಗಿದ್ದ ಶಿವಕುಮಾರ್, ತನ್ನಿಬ್ಬರು ಸಹೋದರರ ಶಿಕ್ಷಣಕ್ಕೆ ಹಾಗೂ ಸಹೋದರಿಯರ ಮದುವೆಗೆ ಹಣ ಹೊಂದಿಸಲು ಸಿದ್ದಿಕಿ ಕೊಲೆಗೈಯ್ಯಲು ಒಪ್ಪಿದ್ದಾನೆ ಎಂದು ಯುಪಿ ಪೊಲೀಸರ ವಿಶೇಷ ಕಾರ್ಯಪಡೆ ತಿಳಿಸಿದೆ. 4 ವರ್ಷದ ಹಿಂದೆ ಉದ್ಯೋಗ ಅರಸಿ ಪುಣೆಗೆ ಬಂದಿದ್ದ ಶಿವಕುಮಾರ್, ಸಿದ್ದಿಕಿ ಕೊಲೆಯ ಮತ್ತೋರ್ವ ಆರೋಪಿ ಧರ್ಮರಾಜ್ ಕಶ್ಯಪ್‌ನನ್ನು ಭೇಟಿಯಾಗಿದ್ದು, ಬಿಷ್ಣೋಯಿ ಗ್ಯಾಂಗ್‌ನ ಆಪ್ತವಲಯಕ್ಕೆ ಶಿವಕುಮಾರ್‌ನನ್ನು ಪರಿಚಯಿಸಿದ್ದ. ಸಿದ್ದಿಕಿ ಹತ್ಯೆಗೆ ಬದಲಾಗಿ ₹10 ಲಕ್ಷ ನೀಡುವುದಾಗಿ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಹೇಳಿದ್ದ. ಅದರಂತೆ ಅ.12ರಂದು ಗುಂಡಿನ ದಾಳಿ ನಡೆಸಿ ಸಿದ್ಧಿಕಿ ಹತ್ಯೆಗೈದಿದ್ದ.
ಸಿದ್ದಿಕಿ ಹತ್ಯಗೈದ ಬಳಿಕ ದುರ್ಗಾ ಪೂಜೆಯ ಮೆರವಣಿಗೆಯಲ್ಲಿ ತಪ್ಪಿಸಿಕೊಂಡಿದ್ದ ಶಿವಕುಮಾರ್, ಮೊಬೈಲ್ ಬಳಕೆಯನ್ನು ನಿಲ್ಲಿಸಿ ಜೀವನ ಕ್ರಮ ಬದಲಿಸಿಕೊಂಡಿದ್ದ. ಬಿಷ್ಣೋಯಿ ಗ್ಯಾಂಗ್‌ನೊಂದಿಗೆ ಸಂಪರ್ಕ ಸಾಧಿಸಲು ಅಪರಿಚಿತ ಮೊಬೈಲ್ ಬಳಸುತ್ತಿದ್ದ. ಪುಣೆಯಿಂದ ಉತ್ತರಪ್ರದೇಶದ ಝಾನ್ಸಿಗೆ ಬಂದ ಅವನು, ನಂತರ ತನ್ನ ತವರಾದ ಬಹ್ರೈಚ್ ಸಮೀಪದ ಅರಣ್ಯಪ್ರದೇಶದಲ್ಲಿ ಯಾರ ಸಂಪರ್ಕಕ್ಕೂ ಸಿಗದೆ ವಾಸವಿದ್ದ. ಅಲ್ಲಿಂದ ಗಡಿದಾಟಿ ನೇಪಾಳಕ್ಕೆ ಪರಾರಿಯಾಗುವ ಯೋಚನೆಯಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.