ಬೆಂಗಳೂರು: ಮಲ್ಲೇಶ್ವರದ ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ನ.15 ರಿಂದ 18ರವರೆಗೆ ಮಲ್ಲೇಶ್ವರ ಕಡಲೆಕಾಯಿ ಪರಿಷೆ, ಕನ್ನಡ ರಾಜ್ಯೋತ್ಸವ ಸ್ವಾಭಿಮಾನ ಆಚರಣೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಕಾಡುಮಲ್ಲೇಶ್ವರ ಗೆಳೆಯರ ಬಳಗ ಅಧ್ಯಕ್ಷ ಬಿ.ಕೆ.ಶಿವರಾಂ ಮಾತನಾಡಿ, ನಾಲ್ಕು ದಿನಗಳ ಪರಿಷೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣದಿಂದ ರೈತರು ಪಾಲ್ಗೊಳ್ಳಲಿದ್ದಾರೆ. 400ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಪರಿಸರ ಸ್ನೇಹಿ, ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಪ್ಲಾಸ್ಟಿಕ್ ಮುಕ್ತ, ಕೈ ಬಟ್ಟೆ ಚೀಲ, ಪೇಪರ್ ಚೀಲಗಳನ್ನು ಜನತೆಗೆ ಉಚಿತವಾಗಿ ನೀಡಲಾಗುವುದು ಎಂದರು.
ಶುಕ್ರವಾರ (ನ.15) 4.30ಕ್ಕೆ ಕೇಂದ್ರ ಮಾಜಿ ಸಚಿವ ವೀರಪ್ಪಮೊಯ್ಲಿ ಪರಿಷೆ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ, ಶಿವರಾಜ್ ತಂಗಡಗಿ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಮುನಿರತ್ನ ಭಾಗವಹಿಸಲಿದ್ದಾರೆ ಎಂದರು.
ನ.16ರಂದು ಸಂಜೆ 6.30ಕ್ಕೆ ಹುಣ್ಣಿಮೆ ಹಾಡು-201 ಕಾರ್ಯಕ್ರಮ ನಡೆಯಲಿದ್ದು, ಬೆಳದಿಂಗಳ ಬೆಸದ ಹುಣ್ಣಿಮೆ ಹಾಡು 200ರ ಸಂಭ್ರಮದಲ್ಲಿ ಡಾ.ಹಂಸಲೇಖ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ನ.17ರಂದು ಹುಣ್ಣಿಮೆ ಹಾಡು ಅಪರೂಪದ ಭಾವಗೀತೆಗಳ ಕಾಯಕ್ರಮ, ಮತ್ತು ಡಾ. ರಾಜ್ ನೆನಪಿನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ನ.18 ಸಂಜೆ 4.30ಕ್ಕೆ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿಯವರಿಗೆ ಕಡಲೆಕಾಯಿ ಅಭಿಷೇಕ ಹಾಗೂ ಸಂಜೆ ಪ್ರಸಿದ್ಧ ಸಾರಂಗಿ ವಾದಕ, ಹಿಂದುಸ್ತಾನಿ ಗಾಯಕ ಉಸ್ತಾದ್ ಫಯಾಜ್‌ಖಾನ್ ‘ಸಾರಂಗಿ ವಾದನ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.