ಕಾನ್ಪುರ: ನಾಲ್ಕು ತಿಂಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಉದ್ಯಮಿಯೊಬ್ಬರ ಪತ್ನಿಯ ಶವ ಕಾನ್ಪುರದ ಐಷಾರಾಮಿ ಪ್ರದೇಶವಾದ ಸಿವಿಲ್ ಲೈನ್ಸ್ನಲ್ಲಿರುವ ಗ್ರೀನ್ ಪಾರ್ಕ್ನಲ್ಲಿ ಪತ್ತೆಯಾಗಿದೆ. ಮಹಿಳೆಯನ್ನು ಏಕ್ತಾ ಗುಪ್ತಾ (32) ಎಂದು ಗುರುತಿಸಲಾಗಿದೆ. ಹತ್ಯೆಯ ನಂತರ ಏಕ್ತಾ ಶವವನ್ನು ವಿಐಪಿ ರಸ್ತೆಯಲ್ಲಿರುವ ಡಿಎಂ ನಿವಾಸದಲ್ಲಿ ಹೂಳಲಾಗಿತ್ತು. ಕಳೆದ 4 ವರ್ಷಗಳಿಂದ ಏಕ್ತಾ ಹೋಗುತ್ತಿದ್ದ ಜಿಮ್ ಟ್ರೈನರ್ ವಿಮಲ್ ಸೋನಿಯೇ ಆಕೆಯನ್ನು ಹತ್ಯೆ ಮಾಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ, ಏಕ್ತಾ ಜಿಮ್ ಟ್ರೈನರ್ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಜಿಮ್ ಟ್ರೇನರ್ ಬೇರೆ ಯುವತಿಯೊಂದಿಗೆ ಮದುವೆಯಾಗಲು ಮುಂದಾಗಿದ್ದಕ್ಕೆ ಏಕ್ತಾ ಕೋಪಗೊಂಡಿದ್ದಳು. ಈ ಬಗ್ಗೆ ಏಕ್ತಾ ಅವರ ಪತಿ ರಾಹುಲ್ ಗುಪ್ತಾ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದು, ವಿಮಲ್ ಸೋನಿ ವಿಚಾರಣೆ ಬಳಿಕವಷ್ಟೇ ಕೊಲೆಯ ಉದ್ದೇಶ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ಮಹಿಳೆ ಏಕ್ತಾ ಗುಪ್ತಾ ಮತ್ತು ಜಿಮ್ ಟ್ರೈನರ್ ವಿಮಲ್ ಸೋನಿ ಸಂಬಂಧ ಹೊಂದಿದ್ದರು. ಜಿಮ್ ತರಬೇತುದಾರನ ಬೇರೆ ಯುವತಿಯೊಂದಿಗೆ ಮದುವೆಯಾಗಲು ಮುಂದಾಗಿದ್ದು, ನಿಶ್ಚಿತಾರ್ಥ ಮಾಡಿಕೊಂಡಿದ್ದನು. ಇದರಿಂದ ಏಕ್ತಾ ಆಕ್ರೋಶಗೊಂಡಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ಸಾಕಷ್ಟು ಜಗಳ ಉಂಟಾಗಿತ್ತು.
ಏಕ್ತಾ ಅವರ ಪತಿ ರಾಹುಲ್ ಗುಪ್ತಾ, ತಮ್ಮ ಪತ್ನಿಯನ್ನು ಸುಳ್ಳುಹೇಳಿ ನಂಬಿಸಿ ಕರೆದೊಯ್ದಿದ್ದಾಗಿ ಜಿಮ್ ಟ್ರೇನರ್ ವಿಮಲ್ ವಿರುದ್ಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಿಮ್ ಟ್ರೈನರ್ ತನ್ನ ಪತ್ನಿಗೆ ಪ್ರೋಟೀನ್ ಶೇಕ್ ಜೊತೆಗೆ ಅಮಲು ಪದಾರ್ಥವನ್ನು ನೀಡಿದ್ದಾನೆ. ಇದಾದ ಬಳಿಕ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದರು. ಜಿಮ್ ಟ್ರೈನರ್ ಕಾರು ಶೋಯೆಬ್ ಹೆಸರಿನಲ್ಲಿ ನೋಂದಣಿಯಾಗಿತ್ತು. ಜಿಮ್ ಟ್ರೈನರ್ ಮತ್ತು ಮಹಿಳೆ ನಾಪತ್ತೆಯಾದ ನಂತರ ಪೊಲೀಸರು ಜೂನ್ 25 ರಂದು ಕಾರನ್ನು ವಶಪಡಿಸಿಕೊಂಡಿದ್ದರು. ಕಾರಿನಲ್ಲಿ ಹಗ್ಗ, ಮುರಿದ ಪರ್ಸ್, ಟವೆಲ್, ಸಿಮ್ ಟ್ರೇ ಮತ್ತಿತರ ವಸ್ತುಗಳು ಪತ್ತೆಯಾಗಿದ್ದವು.
ಜಿಮ್ ತರಬೇತುದಾರ ವಿಮಲ್ ಸೋನಿ ಪೊಲೀಸ್ ವಿಚಾರಣೆ ವೇಳೆ, ಏಕ್ತಾ ಜೊತೆ ಜಗಳ ನಡೆದ ಸಂದರ್ಭದಲ್ಲಿ ಸಿಟ್ಟಿನಲ್ಲಿ ಪಂಚ್ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಪಂಚ್ ಮಾಡಿದ ಬಳಿ ಪ್ರಜ್ಞೆ ತಪ್ಪಿದ ಏಕ್ತಾಳ ಕುತ್ತಿಗೆಗೆ ವೇಲ್ ಬಿಗಿದು ಹತ್ಯೆಮಾಡಿದ್ದು, ಬಳಿಕ ಆಕೆಯ ಮೃತದೇಹವನ್ನು ಕಾರಿನಲ್ಲಿ ಸಾಗಿಸಲಾಗಿತ್ತು. ಡಿಎಂ ಕಂಪೌಂಡ್ ಪಕ್ಕದ ಕ್ಲಬ್ಗೆ ತೆರಳಿ ಅಲ್ಲಿ ಮರಗಳ ನಡುವೆ ಗುಂಡಿ ತೋಡಿ ಶವವನ್ನು ಹೂತುಹಾಕಿ, ತಾನು ನಾಪತ್ತೆಯಾಗಿದ್ದಾಗಿ ವಿಮಲ್ ಹೇಳಿಕೆಯಲ್ಲಿ ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಉದ್ಯಮಿ ರಾಹುಲ್ ಮತ್ತು ಏಕ್ತಾ 2010ರಲ್ಲಿ ವಿವಾಹವಾಗಿದ್ದರು. ಏಕ್ತಾ ಅವರ ತಾಯಿಯ ಮನೆ ಶುಕ್ಲಗಂಜ್ನಲ್ಲಿದೆ ಎಂದು ಪತಿ ರಾಹುಲ್ ಅವರ ಆಪ್ತರು ತಿಳಿಸಿದ್ದಾರೆ. ಡಿಗ್ರಿ ಕಾಲೇಜಿನ ಎದುರಿನ ಅಪಾರ್ಟ್ ಮೆಂಟ್ ನಲ್ಲಿ ಅವರ ಮನೆ ಇದೆ. ಏಕ್ತಾ ಗ್ರೀನ್ ಪಾರ್ಕ್ನಲ್ಲಿರುವ ಜಿಮ್ಗೆ 2 ವರ್ಷಗಳಿಂದ ಹೋಗುತ್ತಿದ್ದರು. ಅಲ್ಲಿ ಆಕೆ ರಾಯಪುರದ ನಿವಾಸಿ ವಿಮಲ್ ಸೋನಿಯನ್ನು ಭೇಟಿಯಾದಳು. ರಾಹುಲ್ ಮತ್ತು ಏಕ್ತಾ ದಂಪತಿಗೆ 12 ವರ್ಷದ ಮಗಳು ಹಾಗೂ 9 ವರ್ಷ ಮಗ ಇದ್ದಾನೆ.