ನವದೆಹಲಿ: ಆಧುನಿಕವಾಗಿ ತಂತ್ರಜ್ಞಾನ ಅಭಿವೃದ್ಧಿ ಆದಂತೆ ಮೋಸ, ವಂಚನೆ ಹೆಚ್ಚಾಗಿದ್ದು, ಎಲ್ಲ ಕ್ಷೇತ್ರಗಳಿಗೆ ಒಂದಿಲ್ಲ ಒಂದು ರೀತಿಯಲ್ಲಿ ವಂಚಕರು ಕಾಟ ಕೊಡುತ್ತಿದ್ದಾರೆ. ಅದೇ ರೀತಿ ಪೈರಸಿ ಕಾರಣದಿಂದ ಮನರಂಜನೆ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.
ಹೌದು, ಪೈರಸಿಯಿಂದ ಭಾರತದ ಮನರಂಜನಾ ಉದ್ಯಮಕ್ಕೆ 2023ರಲ್ಲಿ ಬರೋಬ್ಬರಿ ₹22,400 ಕೋಟಿ ನಷ್ಟವಾಗಿದೆ. ಇದನ್ನು ತಡೆಯಲು ಕಠಿಣ ನಿಯಂತ್ರಣಾ ಕ್ರಮ ಸಂಘಟಿತ ಪ್ರಯತ್ನದ ಅವಶ್ಯಕತೆ ಇದೆ ಎಂದು ವರದಿಯೊಂದು ಬಹಿರಂಗ ಪಡಿಸಿದೆ.
‘ಇವೈ’ ಮತ್ತು ಇಂಟರ್‌ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಿದ್ಧಪಡಿಸಿರುವ ವರದಿಯ ಪ್ರಕಾರ, ಭಾರತದಲ್ಲಿ ಮನರಂಜನಾ ವಲಯದಲ್ಲಿನ ಕೃತಿಚೌರ್ಯ ಉದ್ಯಮವು ₹22,400 ಕೋಟಿ ನಷ್ಟು ಉಂಟಾಗಿದೆ. ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮದಿಂದ ಉತ್ಪತ್ತಿಯಾಗುವ ಆರ್ಥಿಕತೆಯಲ್ಲಿ ವಿಭಾಗವಾರು ಆದಾಯದಲ್ಲಿ ಇದು ಇದು ನಾಲ್ಕನೇ ಸ್ಥಾನದಲ್ಲಿದೆ.
ಇನ್ನು ಭಾರತದ ಮಾಧ್ಯಮ ಗ್ರಾಹಕರ ಪೈಕಿ ಶೇ.51ರಷ್ಟು ಜನರು ಕೃತಿಚೌರ್ಯದ ಮೂಲಗಳಿಂದಲೇ ವಿಷಯ/ ವಸ್ತುವನ್ನು ಪಡೆಯುತ್ತಾರೆ. ಈ ಪೈಕಿ ಚಿತ್ರಮಂದಿರಗಳಿಂದ ಪೈರಸಿ ಮಾಡಿದ ಚಿತ್ರಗಳಿಂದ ₹13,700 ಕೋಟಿ, ಒಟಿಟಿ ಪ್ಲಾಟ್‌ಫಾರ್ಮ್‌ಗಳಿಂದ ₹8,700 ಕೋಟಿ ಹಾಗೂ ಸಂಭಾವ್ಯ ಜಿಎಸ್‌ಟಿಯಿಂದ ₹4,300 ಕೋಟಿ ನಷ್ಟ ಉಂಟಾಗಿದೆ ಎಂದು ವರದಿ ತಿಳಿಸಿದೆ.