ಬೈರೂತ್: ಲೆಬನಾನ್ ರಾಜಧಾನಿ ಬೈರೂತ್‌ನ ಅಲ್ ಸಹೇಲ್ ಆಸ್ಪತ್ರೆಯ ಕೆಳಗೆ ಹಿಜ್ಬುಲ್ಲಾ ಉಗ್ರರು ಸಂಗ್ರಹಿಸಿ ಇಟ್ಟಿದ್ದ 4200 ಕೋಟಿ . ಮೌಲ್ಯದ ನಗದು ಮತ್ತು ಚಿನ್ನದ ಸಂಗ್ರಹ ಪತ್ತೆಯಾಗಿದೆ. ಇದನ್ನು ತನ್ನ ಕಾರ್ಯಾಚರಣೆಗಾಗಿ ಹಿಜ್ಬುಲ್ಲಾ ಉಗ್ರರು ಸಂಗ್ರಹಿಸಿ ಇಟ್ಟಿದ್ದರು ಎಂದು ಇಸ್ರೇಲ್ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಇಸ್ರೇಲ್ ಸೇನೆಯ ವಕ್ತಾರ ಡೇನಿಯಲ್ ಹಗರಿ, ‘ಬೈರೂತ್‌ನ ಆಸ್ಪತ್ರೆಯ ತಳಭಾಗದಲ್ಲಿ ನಿರ್ಮಿಸಿರುವ ಸುರಂಗದಲ್ಲಿ ಹಿಜ್ಬುಲ್ಲಾ ಉಗ್ರರು ಸಂಗ್ರಹಿಸಿದ್ದ ಭಾರೀ ಪ್ರಮಾಣದ ನಗದು ಮತ್ತು ಚಿನ್ನದ ಸಂಗ್ರಹ ಕುರಿತ ರಹಸ್ಯ ಮಾಹಿತಿಯನ್ನು ಇದೀಗ ಬಹಿರಂಗಪಡಿಸುತ್ತಿದ್ದೇವೆ. ಇದನ್ನು ಕೆಲ ದಿನಗಳ ಹಿಂದೆ ಹತನಾದ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸಂಗ್ರಹಿಸಿ ಇಟ್ಟಿದ್ದ. ಆದರೆ ಈ ಮಾಹಿತಿ ಸಿಕ್ಕ ಹೊರತಾಗಿಯೂ ನಾವು ಇನ್ನೂ ಅದರ ಮೇಲೆ ದಾಳಿ ನಡೆಸಿಲ್ಲ. ಇದನ್ನು ಹೊರತೆಗೆದು ಅದನ್ನು ಲೆಬನಾನ್‌ನ ಪುನರ್ ನಿರ್ಮಾಣಕ್ಕೆ ಬಳಸಬಹುದಾಗಿದೆ’ ಎಂದು ಹೇಳಿದ್ದಾರೆ.
ಕಳೆದ ಭಾನುವಾರ ಇಸ್ರೇಲಿ ವಾಯುಪಡೆಗಳು, ಹಿಜ್ಬುಲ್ಲಾ ನಂಟಿನ ಹಣಕಾಸು ಸಂಸ್ಥೆಗಳು ಸೇರಿದಂತೆ ವಿವಿಧ ಸ್ಥಳಗಳ ಮೇಲೆ 300 ದಾಳಿ ನಡೆಸಿದ್ದವು.
ಈ ನಡುವೆ ಇಸ್ರೇಲಿ ಸೇನಾಪಡೆಗಳು ಸಿರಿಯಾದಲ್ಲಿರುವ ಹಿಜ್ಬುಲ್ಲಾಗಳಿಗೆ ಹಣಕಾಸು ನೆರವಿನ ಕೇಂದ್ರ ಸ್ಥಾನವೆಂದು ಪರಿಗಣಿಸಲಾದ ಯುನಿಟ್ 4400 ಎಂಬ ಕೇಂದ್ರದ ಮೇಲೂ ಸೋಮವಾರ ದಾಳಿ ನಡೆಸಿವೆ. ಈ ಘಟಕದ ಮೂಲಕವೇ ಇರಾನ್‌ನಿಂದ ಹಿಜ್ಬುಲ್ಲಾಗಳಿಗೆ ಹಣಕಾಸಿ ನೆರವು ನೀಡುತ್ತಿತ್ತು ಎಂದು ಇಸ್ರೇಲ್ ಆರೋಪಿಸಿದೆ.