ಯಾದಗಿರಿ: ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವ ವಾಹನ ಡಿಕ್ಕಿಯಾದ ಪರಿಣಾಮ 2 ವರ್ಷದ ಪುಟ್ಟ ಬಾಲಕ ಸಾವನ್ನಪ್ಪಿದ ಧಾರುಣ ಘಟನೆ ಸುರಪುರ ತಾಲ್ಲೂಕಿನ ಯಡಿಯಾಪುರ ಗ್ರಾಮದಲ್ಲಿ ನಡೆದಿದೆ. ಆರೋಯಿ(2) ಮೃತ ದುರ್ದೈವಿ ಮಗುವಾಗಿದ್ದಾನೆ.
ಯಡಿಯಾಪುರ ಗ್ರಾಮದ ಮಗು ಆರೋಯಿ ತಮ್ಮ ಮನೆಯ ಮುಂದೆ ಆಟವಾಡುತ್ತಿತ್ತು. ಈ ವೇಳೆ ಮನೆ ಮನೆಗೆ ಸಿಲಿಂಡರ್ ಪೂರೈಕೆ ಮಾಡುವ ವಾಹನ ಆಗಮಿಸಿದೆ. ಆಟವಾಡುತ್ತಿದ್ದ ಮಗುವನ್ನು ಗಮನಿಸದ ಸಿಲಿಂಡರ್ ವಾಹನ ಮಗುವಿಗೆ ಡಿಕ್ಕಿಯಾಗಿದ್ದು, ಮಗು ಗಂಭೀರ ಗಾಯಗೊಂಡಿದೆ. ವಾಹನ ಬಡಿದ ರಭಸಕ್ಕೆ ಕುಸಿದು ಬಿದ್ದ ಮಗುವಿನ ಕಿವಿ, ಬಾಯಿಯಲ್ಲಿ ರಕ್ತ ಬಂದಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದೆ.
ಆಟವಾಡಿಕೊಂಡಿದ್ದ ಮಗು ಸಾವನ್ನಪ್ಪಿದ್ದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಕೆಂಭಾವಿ ಪೊಲೀಸ್ ಠಾಣೆಯ ಪಿಎಸ್‌ಐ ಅಮೋಜ್ ಕಾಂಬಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಲಿಂಡರ್ ಸಾಗಾಟದ ವಾಹನ ಚಾಲಕನ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.