ಮುಂಬೈ: ಆರ್‌ಬಿಐ ದೇಶೀಯವಾಗಿ ಸಂಗ್ರಹಿಸುವ ಚಿನ್ನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದೆ. ಕಳೆದ ಮಾರ್ಚ್ 31ರವರೆಗೆ ದೇಶದಲ್ಲಿ 408 ಮೆಟ್ರಿಕ್ ಟನ್ ಚಿನ್ನ ಸಂಗ್ರಹವಿತ್ತು. ಈ ಪ್ರಮಾಣ ಸೆ.30ರವೇಳೆಗೆ 510.46 ಮೆಟ್ರಿಕ್ ಟನ್‌ಗೆ ಏರಿದೆ. ಅಂದರೆ 6 ತಿಂಗಳ ಅವಧಿಯಲ್ಲಿ ದೇಶೀಯವಾಗಿ ಸಂಗ್ರಹಿಸಿ ಇಡಲಾದ ಚಿನ್ನದ ಪ್ರಮಾಣದಲ್ಲಿ 102 ಮೆಟ್ರಿಕ್ ಟನ್ ಏರಿಕೆಯಾಗಿದೆ ಎಂದು ಆರ್‌ಬಿಐ ಬಿಡುಗಡೆ ಮಾಡಿರುವ ಅರ್ಧವಾರ್ಷಿಕ ವರದಿ ತಿಳಿಸಿದೆ.
ಅಲ್ಲದೆ ಕಳೆದ ತಿಂಗಳಲ್ಲಿ ತಾನು ಮತ್ತೆ 32 ಮೆಟ್ರಿಕ್ ಚಿನ್ನ ಖರೀದಿ ಮಾಡಿದ್ದು, ಇದರೊಂದಿಗೆ ತನ್ನ ಸಂಗ್ರಹದಲ್ಲಿರುವ ಒಟ್ಟಾರೆ ಚಿನ್ನದ ಪ್ರಮಾಣ 854.73 ಮೆಟ್ರಿಕ್ ಟನ್ ತಲುಪಿದೆ ಎಂದು ಆರ್‌ಬಿಐ ಹೇಳಿದೆ. ಕಳೆದ ಕೆಲ ವರ್ಷಗಳ ಹಿಂದೆ ಭಾರತ ದೇಶೀಯವಾಗಿ ಹೊಂದಿದ್ದ ಚಿನ್ನದ ಮೀಸಲು ಸಂಗ್ರಹವು, ಒಟ್ಟು ಸಂಗ್ರಹದಲ್ಲಿ ಶೇ.50ರಷ್ಟಿತ್ತು. ಅದೀಗ ಶೇ.60ಕ್ಕೆ ಹೆಚ್ಚಳವಾಗಿದೆ.
ಭಾರತವು ವಿದೇಶಗಳ ಪೈಕಿ ಬ್ಯಾಂಕ್ ಆಫ್ ಇಂಗ್ಲೆಂಡ್, ಬ್ಯಾಂಕ್ ಫಾರ್ ಇಂಟರ್‌ನ್ಯಾಶನಲ್ ಸೆಟಲ್‌ಮೆಂಟ್ಸ್ ಇರಿಸಿದೆ. ಅಂದರೆ ಹೆಚ್ಚು ಕಡಿಮೆ 340 ಟನ್ ವಿದೇಶಗಳಲ್ಲಿ ಸಂಗ್ರಹ ಮಾಡಿಟ್ಟಿದೆ.