ಉಡುಪಿ: ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಎಸ್ಪಿ ಡಾ. ಅರುಣ್ ಕೆ. ಮಾತನಾಡಿ, ಸ್ಥಳೀಯ ಮಹಿಳೆ ಲಕ್ಷ್ಮೀಬಾಯಿ ಎಂಬುವವರು ವಿಜಯನಗರ ಜಿಲ್ಲೆಯ ಮಹಿಳೆಯೊಬ್ಬಳು ಮೀನು ಕದಿಯುತ್ತಿದ್ದಾರೆ ಎಂದು ಆರೋಪಿಸಿ ಮಂಗಳವಾರ ಆಕೆಯ ಮೇಲೆ ಹಲ್ಲೆ ಮಾಡಿದ್ದರು. ನಂತರ, ಸಂತ್ರಸ್ತೆಯನ್ನು ಮರಕ್ಕೆ ಕಟ್ಟಿ, ಕಪಾಳಮೋಕ್ಷ ಮಾಡಿ ಹಲ್ಲೆ ಮಾಡಲಾಗಿತ್ತು. ಅಲ್ಲದೇ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದರು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಮಲ್ಪೆ ಪೊಲೀಸರು ಬಿಎನ್ಎಸ್ ಸೆಕ್ಷನ್ 74, 115, 351 ಮತ್ತು 352 ರ ಅಡಿಯಲ್ಲಿ ಮತ್ತು ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಲಕ್ಷ್ಮೀಬಾಯಿ, ಸುಂದರ್, ಶಿಲ್ಪಾ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪೊಲೀಸರು ವೀಡಿಯೊವನ್ನು ಮತ್ತಷ್ಟು ಪರಿಶೀಲಿಸುತ್ತಿದ್ದು, ಮಹಿಳೆಯ ಮೇಲೆ ಹಲ್ಲೆ ಮಾಡಿದ ಎಲ್ಲರನ್ನೂ ಬಂಧಿಸಲು ಕ್ರಮ ಕೈಗೊಂಡಿದ್ದಾರೆ.