ವಿಜಯನಗರ: ನಿಧಿ ಆಸೆಗೆ ಕಳ್ಳರು ಪುರಾತನ ದೇವಸ್ಥಾನದ ಪಾದಗಟ್ಟೆ ಅಗೆದ ಘಟನೆ ವಿಜಯನಗರದ ತಿಮ್ಮಲಾಪುರ ಗ್ರಾಮದಲ್ಲಿ ನಡೆದಿದೆ. ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಇರುವ ಹೊಸೂರಮ್ಮ ದೇವಾಲಯವನ್ನು ನಿಧಿಕಳ್ಳರು ಅಗೆದಿದ್ದು, ದೇವರ ವಿಗ್ರಹಗಳನ್ನು ಕಿತ್ತು ಅಗೆದು ಹಾಕಿದ್ದಾರೆ.
ವಿಜಯನಗರ ಅರಸರು ನಿರ್ಮಿಸಿದ 15ನೇ ಶತಮಾನದ ಹೊಸೂರಮ್ಮ ದೇವಸ್ಥಾನ ಇದಾಗಿದೆ. ವಿಶ್ವಪಾರಂಪರಿಕ ಪಟ್ಟಿಗೆ ಸೇರಿದ ದೇವಸ್ಥಾನ ಇದಾಗಿದ್ದು, ಪುರಾತನ ದೇವಾಲಯ ಆಗಿದ್ದರಿಂದ ನಿಧಿ ಆಸೆಗೆ ಅಗೆದಿರುವ ಶಂಕೆ ವ್ಯಕ್ತವಾಗಿದೆ.
ಈ ದೇವಾಲಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಸೇರಿದ್ದಾದರೂ ಸಹ ರಕ್ಷಣೆ ಇಲ್ಲವಾಗಿದೆ. ಪುರಾತತ್ವ ಇಲಾಖೆ ಅಧಿಕಾರಿಗಳು ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ರಕ್ಷಣೆ ನೀಡುವಲ್ಲಿ ವಿಫಲವಾಗಿದ್ದು, ಇದೀಗ ನಿಧಿ ಆಸೆಯ ಕಳ್ಳರಿಂದಾಗಿ ದೇವಸ್ಥಾನಕ್ಕೆ ಹಾನಿಯುಂಟಾಗಿದೆ. ಹೀಗಾಗಿ ಪುರಾತನ ದೇವಸ್ಥಾನವನ್ನು ರಕ್ಷಿಸುವ ಕೆಲಸವಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.