ಹಾವೇರಿ: ಉಪಚುನಾವಣೆ ಮುಗಿದ ಬಳಿಕ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ನೂರಕ್ಕೆ ನೂರು ಖಚಿತ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಿಗ್ಗಾವಿಯಲ್ಲಿ ಉಪಚುನಾವಣೆ ನಿಮಿತ್ತ ತಮ್ಮ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಚಿವ ಮಧು ಬಂಗಾರಪ್ಪ ಈ ಹೇಳಿಕೆ ನೀಡಿದ್ದಾರೆ.
ಶಿಗ್ಗಾವಿ, ಸಂಡೂರು ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಕಾಂಗ್ರೆಸ್ ಪರ ವಾತಾವರಣ ಇದೆ. ಸರ್ಕಾರದ ಮೇಲೆ ಜನರು ವಿಶ್ವಾಸ ವ್ಯಕ್ತಪಡಿಸುತ್ತಿದ್ದು, ನಾವು ಕೊಟ್ಟ ಗ್ಯಾರೆಂಟಿ ಯೋಜನೆಗಳು ನಮ್ಮನ್ನು ಕಾಪಾಡುತ್ತವೆ ಎಂದರು.
ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಮೇಲೆ ಆರೋಪ ಹೊರಿಸುವ ಬಿಜೆಪಿಯವರ ಹೇಳಿಕೆಗಳಿಗೆ ತಿರುಗೇಟು ನೀಡಿದ ಮಧು ಬಂಗಾರಪ್ಪ ತೇಜಸ್ವಿ ಸೂರ್ಯ ಮೇಲೆ ಇವತ್ತು ಯಾಕೆ ಕೇಸ್ ಆಗಿದೆ? ಸುಳ್ಳು ಹೇಳಿಕೊಂಡು ಓಡಾಡುವವರಿಗೆ ಇಂತದ್ದು ಆಗಬೇಕು. ನಮ್ಮ ಬಾಯಿಯಿಂದ ಬರುವ ಮಾತುಗಳಿಂದ ಜನರು ಹಾದಿ ತಪ್ಪುವಂತಾಗಬಾರದು. ಬಿಜೆಪಿ ಮನೆಯಲ್ಲಿಯೂ ಬಂಗಾರಪ್ಪನವರು ಕೊಟ್ಟ ಪ್ರೀ ಕರೆಂಟ್ ಇದೆ. ಬಿಜೆಪಿಯವರು ಸುಳ್ಳು ಹೇಳುವುದು ಬಿಟ್ರೆ ಏನಿಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂಧ್ರ ಮುಡಾ ಪಾದಯಾತ್ರೆ ಮಾಡಿದ್ರು. ಅವರ ಮೇಲೇ ಎಷ್ಟು ಕೇಸ್ ಇವೆ ಗೊತ್ತಿದೆಯಾ? ಮನಿ ಲಾಂಡ್ರಿಂಗ್, ಭ್ರಷ್ಟಾಚಾರ ಆರೋಪದ ಪ್ರಕರಣಗಳಿವೆ. ಬೇಲ್ ಮೇಲೆ ಇದೀನಿ ಎಂದು ಅಫಿಡವಿಟ್‌ನಲ್ಲೇ ಹೇಳಿಕೊಂಡಿದ್ದಾರೆ. ಅಂತವರು ಹೋಗಿ ಭ್ರಷ್ಟಾಚಾರದ ಬಗ್ಗೆ ಮಾತಾಡಿದರೆ, ಬೇಲಿನೆ ಎದ್ದು ಹೊಲ ಮೇಯ್ದಂತೆ ಎಂದ ಬಂದು ಬಂಗಾರಪ್ಪ, ಈ ಚುನಾವಣೆ ಆದ ಮೇಲೆ ವಿಜಯೇಂದ್ರ ನೂರಕ್ಕೆ ನೂರು ಕೆಳಗಿಳಿಯುತ್ತಾರೆ. ಯತ್ನಾಳ್ ಅವರು ಮುಹೂರ್ತ ಇಟ್ಟಿರೋದು ಸಿಎಂ ಸಿದ್ಧರಾಮಯ್ಯ ಅವರಿಗಲ್ಲ, ವಿಜಯೇಂದ್ರ ಅವರಿಗೆ ಎಂದಿದ್ದಾರೆ.