ಬೆಂಗಳೂರು: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಹಲವಾರು ಗಂಟೆಗಳ ನಿರಂತರ ಓದಿಗಿಂತ, ಏಕಾಗ್ರತೆಯಿಂದ ವ್ಯವಸ್ಥಿತವಾದ ಗುಣಮಟ್ಟದ ಓದು ಹಾಗೂ ಅದನ್ನು ಅರ್ಥೈಸಿಕೊಂಡು ಸಮರ್ಥವಾದ ಉತ್ತರ ಬರೆಯುವುದು ಮುಖ್ಯ ಎಂದು ಯುಪಿಎಸ್‌ಸಿ ಅಧ್ಯಕ್ಷರಾಗಿದ್ದ ಡಿ.ಪಿ ಅಗರವಾಲ್ ಐಎಎಸ್ ಪರೀಕ್ಷೆಯ ಆಕಾಂಕ್ಷಿಗಳಿಗೆ ಕಿವಿ ಮಾತು ಹೇಳಿದರು.
ಇಂದು ಚಂದ್ರ ಲೇಔಟ್ ನಲ್ಲಿರುವ ಗ್ರೇಸ್ ಐಎಎಸ್ ಕೋಚಿಂಗ್ ಸೆಂಟರ್ ವತಿಯಿಂದ ಆಯೋಜಿಸಲಾಗಿದ್ದ ಐಎಎಸ್ ಅಕಾಂಕ್ಷಿಗಳೊಂದಿಗೆ ವಿಶೇಷ ಸಂವಾದದಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ತಂತ್ರಗಳ ಬಗ್ಗೆ ಮಾಹಿತಿ ನೀಡಿದರು.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಹಲವಾರು ಗಂಟೆಗಳ ನಿರಂತರ ಓದಿನ ಅಗತ್ಯವಿದೆ ಎನ್ನುವುದು ತಪ್ಪು ತಿಳುವಳಿಕೆ. ಹಲವಾರು ಗಂಟೆಗಳ ಕಾಲ ಅಧ್ಯಯನಕ್ಕಿಂತ ಹೆಚ್ಚಾಗಿ ಕೆಲವೇ ಗಂಟೆಗಳ ನಿರಂತರ ಏಕಾಗ್ರತೆ, ವಿಚಲಿತರಾಗದೇ ವಿಷಯದ ಬಗ್ಗೆ ಆಳವಾದ ಅರ್ಥೈಸುವಿಕೆ ಹಾಗೂ ಅದನ್ನ ನಿಮ್ಮದೇ ಆದ ತರ್ಕಬದ್ದವಾಗಿ, ವಿಶ್ಲೇಷಣೆಯ ಉತ್ತರ ಬರೆಯುವುದನ್ನು ರೂಢಿಸಿಕೊಳ್ಳುವುದು ಮುಖ್ಯ. ಎರಡು ಗಂಟೆಗಳ ಪರೀಕ್ಷೆಯಲ್ಲಿ ಒಂದೆಡೆ ಕುಳಿತು ಬರೆಯುವಲ್ಲಿ ಬಹಳಷ್ಟು ಅಭ್ಯರ್ಥಿಗಳು ವಿಫಲರಾಗುತ್ತಾರೆ. ಪ್ರಾರಂಭದ ಕೆಲವು ನಿಮಿಷಗಳ ನಂತರ ವಿಚಲಿತರಾಗಿ ಸಮಯ ವ್ಯರ್ಥ ಮಾಡುವುದನ್ನೂ ಕಂಡಿದ್ದೇನೆ.
ಇದನ್ನ ತಪ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎರಡು ಗಂಟೆಗಳ ಕಾಲ ನಿರಂತರವಾಗಿ ಯಾವುದೇ ಅಡಚಣೆ ಇಲ್ಲದೇ ಒಂದು ಸ್ಥಳದಲ್ಲಿ ಏಕಾಗ್ರತೆಯಿಂದ ಅಧ್ಯಯನ ಹಾಗೂ ಅದನ್ನು ವಿಶ್ಲೇಷಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೋಚಿಂಗ್ ಸೆಂಟರ್‌ಗಳಲ್ಲಿ ಸಿಗುವ ಮೇಟೀರಿಯಲ್ ಜೊತೆಯಲ್ಲಿಯೇ ಸಮಗ್ರ ವಿಷಯ ಅರ್ಥೈಸಿಕೊಳ್ಳಲು ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಆದರೆ, ಉತ್ತರ ಮಾತ್ರ ನಿಮ್ಮದೇ ವಿಶೇಷ ಶೈಲಿಯಲ್ಲಿರಬೇಕೆ ಹೊರತು, ಪುಸ್ತಕದ ಕಾಪಿಯಂತಲ್ಲ ಎಂದು ಕಿವಿ ಮಾತು ತಿಳಿಸಿದರು.
ಪ್ರತಿ ವರ್ಷ ಸರಿಸುಮಾರು 6 ಲಕ್ಷ ಆಕಾಂಕ್ಷಿಗಳು ಎದುರಿಸುವ ಪರೀಕ್ಷೆಯಲ್ಲಿ ಯಶಸ್ಸುಗಳಿಸುವುದು ಕೇವಲ 1000 ಮಾತ್ರ. ಇದನ್ನು ಸಾಧಿಸಲು ಯಾವುದೇ ಸಿದ್ದ ಸೂತ್ರಗಳಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ವಿಶೇಷ ತಯಾರಿಯಿಂದ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುತ್ತಾರೆ. ಜಗತ್ತಿನಲ್ಲಿ ಕೇಳಿ ಬರುವ ಇತರ ಸೂತ್ರಗಳನ್ನ ಆಧರಿಸುವುದಕ್ಕಿಂತ ನಿಮ್ಮ ಸಾಮರ್ಥ್ಯ ವೃದ್ದಿಸಿಕೊಳ್ಳುವತ್ತ ಹೆಚ್ಚಿನ ಗಮನ ನೀಡಿ ಎಂದರು.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಕಾಣಲು ಕೇವಲ ಇಂಗ್ಲೀಷ್ ಭಾಷೆಯೇ ಆಗಬೇಕಾಗಿಲ್ಲ. ಆಯ್ಕೆ ಮಾಡಿಕೊಳ್ಳಬಹುದಾದ ಎಲ್ಲಾ ಭಾಷೆಗಳಿಗೂ ಸಮಾನ ಮಾನ್ಯತೆ ಸಿಗುತ್ತದೆ. ಆದರೆ ಆಕಾಂಕ್ಷಿಗಳು ಆಯ್ಕೆ ಮಾಡುವ ಭಾಷೆಯಲ್ಲಿ ಉತ್ತರ ಬರೆಯುವ ಹಾಗೂ ಉತ್ತಮ ಸಂವಹನ ಮಾಡುವ ಸಾಮರ್ಥ್ಯ ಇರಬೇಕು. ಪರೀಕ್ಷೆಯನ್ನು ಇಂಗ್ಲೀಷ್‌ನಲ್ಲಿ ಬರೆದು ಸಂದರ್ಶನವನ್ನು ಕನ್ನಡದಲ್ಲಿಯೂ ನೀಡಬಹುದು. ಹಲವಾರು ಅವಕಾಶಗಳಿದ್ದು ಅವುಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಪರೀಕ್ಷೆಯಲ್ಲಿ ಬರೆಯುವ ಉತ್ತರ, ಪ್ರಶ್ನೆಗೆ ಅನುಗುಣವಾಗಿ ವಿಶ್ಲೇಷಣೆ ಮಾಡುವ ತರ್ಕಬದ್ದವಾಗಿ ವಾದ ಮಂಡಿಸುವಂತಿರಬೇಕೆ ಹೊರತು, ಯಾರನ್ನೋ ಮೆಚ್ಚಿಸುವಂತಹದ್ದಲ್ಲ. ಇದು ಸಂದರ್ಶನಕ್ಕೂ ಅನ್ವಯವಾಗುತ್ತದೆ. ತಮಗೆ ತಿಳಿದಿರುವ ಉತ್ತರವನ್ನು ಉತ್ತಮವಾಗಿ ನಿಮ್ಮದೇ ಆದ ಶೈಲಿಯಲ್ಲಿ ಪ್ರಸುತಪಡಿಸಬೇಕು. ಇದರಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯ ಎಂದರು. ಆಕಾಂಕ್ಷಿಗಳ ಹಲವಾರು ಪ್ರಶ್ನೆಗಳೀಗೆ ಉತ್ತರಿಸುವ ಮೂಲಕ ಆಕಾಂಕ್ಷಿಗಳನ್ನು ಪ್ರೋತ್ಸಾಹಿಸಿದರು.
ಗ್ರೇಸ್ ಐಎಎಸ್ ಕೋಚಿಂಗ್ ಸೆಂಟರ್ ನ ನಿರ್ದೇಶಕರಾದ ಸಂಜು ಸಿಂಗ್ ಮಾತನಾಡಿ, ಸಂಸ್ಥೆಯಲ್ಲಿ ಲಭ್ಯವಿರುವ ಹಲವಾರು ಕೋಚಿಂಗ್ ಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮ ದಲ್ಲಿ ಗ್ರೇಸ್ ಐಎಎಸ್ ಸಂಸ್ಥೆಯ ಮಾರ್ಗದರ್ಶಕರಾದ ಸಂಜು ಸಿಂಗ್ ಚೌಹಾಣ್, ಧ್ರುವ ಕುಮಾರ್ ಮತ್ತು ಗೌರವ್ ಗುಪ್ತಾ ಸೇರಿದಂತೆ ನೂರಾರು ಆಕಾಂಕ್ಷಿಗಳು ಉಪಸ್ಥಿತರಿದ್ದರು.